ವಾರಣಾಸಿ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಪ್ರವಾಸೋದ್ಯಮ ವ್ಯವಹಾರದ ಮೇಲೆ ಬಾರಿ ಪರಿಣಾಮ ಬೀರಲಿದೆ. ಅಯೋಧ್ಯೆಯಲ್ಲಿ ಹೋಟೆಲ್ ದರ ಸುಮಾರು 1 ಲಕ್ಷ ರೂಪಾಯಿ ತಲುಪಿದೆ.
ವಾರಣಾಸಿ ಟೂರ್ ಆಪರೇಟರ್‌ಗಳ ಹೊಸ ಯೋಜನೆ : ರಾಮ ಲಲ್ಲಾ ದರ್ಶನಕ್ಕಾಗಿ ಬುಕ್ಕಿಂಗ್ ನಿರಂತರವಾಗಿ ಹೆಚ್ಚುತ್ತಿದೆ. ಈ ಮಧ್ಯೆ, ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ಬುಕ್ ಮಾಡಲಾದ ಹೋಟೆಲ್ ಅನ್ನು ರದ್ದುಗೊಳಿಸುವ ಕಸರತ್ತನ್ನೂ ಸರ್ಕಾರ ಆರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸಿಗರ ಅನುಕೂಲವನ್ನು ಪರಿಗಣಿಸಿ ವಾರಣಾಸಿಯ ಟೂರ್ ಆಪರೇಟರ್‌ಗಳು ಹೊಸ ಯೋಜನೆಗೆ ಮುಂದಾಗಿದ್ದಾರೆ. ಬುಕ್ಕಿಂಗ್ ಮಾಡಿರುವ ಪ್ರವಾಸಿಗರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಕಾಶಿಯಿಂದ ಅಯೋಧ್ಯೆಗೆ ಹೊಸ ಟೂರ್ ಪ್ಯಾಕೇಜ್ ಪ್ಲಾನ್ ಮಾಡಿದ್ದಾರೆ. ಅದರಂತೆ, ಪ್ರಯಾಣಿಕರು ವಾರಣಾಸಿಯಲ್ಲಿ ಉಳಿದುಕೊಳ್ಳುವ ಜೊತೆಗೆ ಅಯೋಧ್ಯೆಗೂ ಭೇಟಿ ನೀಡಬಹುದು. ಈ ಯೋಜನೆಯು 2 ರಾತ್ರಿ, 3 ಹಗಲು ಇರಲಿದೆ. ಜೊತೆಗೆ ಜನರನ್ನು ಕಾಶಿ, ಪ್ರಯಾಗರಾಜ್ ಹಾಗೂ ಅಯೋಧ್ಯೆಗೆ ಕರೆದೊಯ್ಯಲಾಗುತ್ತದೆ.
ಹೋಟೆಲ್ ದರ ದುಬಾರಿ: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ಅಯೋಧ್ಯೆಯಲ್ಲಿ ಉಳಿಯುವುದು ತುಂಬಾ ದುಬಾರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಹೋಟೆಲ್ಗಳ ಸಂಖ್ಯೆ ಕೇವಲ 30 ಮಾತ್ರ. ಅದರಲ್ಲಿ ಸುಮಾರು ಎರಡು ಅಥವಾ ಮೂರು 4 ಸ್ಟಾರ್ ಹೋಟೆಲ್‌ಗಳು ಮಾತ್ರ ಇವೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಬುಕ್ಕಿಂಗ್ ನೋಡಿದ ಹೋಟೆಲ್ ಮಾಲೀಕರು, ದರವನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ.
4 ಸ್ಟಾರ್ ಹೋಟೆಲ್ಗಳಲ್ಲಿಯೂ ದರವು ದಿನಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗಳಿಗೆ ಏರಿದೆ. ಇದರಿಂದ ಸಾಮಾನ್ಯ ಪ್ರಯಾಣಿಕರ ಜೊತೆಗೆ ಪ್ರವಾಸಿ ಸಂಸ್ಥೆಗಳಿಗೂ ದುಬಾರಿ ಆಗುತ್ತಿದೆ. ಇಷ್ಟು ದರ ಪಾವತಿಸಲು ಪ್ರಯಾಣಿಕರು ಮುಂದೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೂರ್ ಆಪರೇಟರ್‌ಗಳು ಮತ್ತೊಂದು ಯೋಜನೆ ಸಿದ್ಧಪಡಿಸಿದ್ದಾರೆ.
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಆಧ್ಯಾತ್ಮಿಕ ಪ್ರವಾಸದ ನಿರ್ದೇಶಕ ಸಂತೋಷ್ ಸಿಂಗ್, ಬನಾರಸ್ ನಗರವು ಮೊದಲು ಕಾಶಿಧಾಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು. ಈಗ ಅಯೋಧ್ಯಾ ಧಾಮ ನಿರ್ಮಾಣದೊಂದಿಗೆ ಬನಾರಸ್‌ನಲ್ಲಿ ಜನವರಿ, ಫೆಬ್ರವರಿ ಮತ್ತು ಮಾರ್ಚ್‌ಗೆ ಮುಂಗಡ ಬುಕ್ಕಿಂಗ್ ಶರುವಾಗಿದೆ. ಕನಿಷ್ಠ 2 ರಾತ್ರಿ ಮತ್ತು 3 ದಿನಗಳ ಪ್ಯಾಕೇಜ್‌ಗಳು ಲಭ್ಯವಿದೆ. ಗರಿಷ್ಠ 7 ರಾತ್ರಿ ಮತ್ತು 8 ದಿನಗಳು ಇರುತ್ತದೆ. ಇದರಿಂದಾಗಿ ಬರುವ ಅತಿಥಿಗಳೆಲ್ಲ ವಾರಣಾಸಿ ಮತ್ತು ಅಯೋಧ್ಯೆ ಎರಡೂ ಕಡೆ ಭೇಟಿ ನೀಡಲು ಬರುತ್ತಿದ್ದಾರೆ. ನಾವು 100 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಸ್ವೀಕರಿಸಿದ್ದೇವೆ ಎಂದರು.
ಇದನ್ನೂ ಓದಿ : ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಮನೆ-ಮನೆಗೆ ಆಮಂತ್ರಣ; ಬಿಜೆಪಿ ಅಭಿಯಾನ
ಅಯೋಧ್ಯೆಯಲ್ಲಿ ಬುಕ್ಕಿಂಗ್ ದುಬಾರಿಯಾಗುತ್ತಿದೆ: ನಿರ್ದೇಶಕ ಸಂತೋಷ್ ಸಿಂಗ್ ಪ್ಯಾಕೇಜ್ ಬಗ್ಗೆ ಮಾತನಾಡಿ, ಇಬ್ಬರಿಗೆ ಕನಿಷ್ಠ ಎಂದರೆ 2 ರಾತ್ರಿ ಮತ್ತು 3 ಹಗಲುಗಳ ಪ್ಯಾಕೇಜ್ ಇದೆ. ಒಬ್ಬರಿಗೆ ಕನಿಷ್ಠ 8 ಸಾವಿರ ರೂ. ವೆಚ್ಚವಾಗಲಿದೆ, ಇದರಲ್ಲಿ ಒಂದು ರಾತ್ರಿ ಅಯೋಧ್ಯೆಗೆ ಒಂದು ರಾತ್ರಿ ವಾರಣಾಸಿಗೆ ಹೋಗಬಹುದು. ಮುಂಗಡ ಟಿಕೆಟ್ ಕಾಯ್ದಿರಿಸಿ ಮಾಹಿತಿ ಸಂಗ್ರಹಿಸುವ ಕೆಲಸ ಇನ್ನೂ ನಡೆಯುತ್ತಿದ್ದು, ನಿರಾಕರಿಸುತ್ತಿದ್ದೇವೆ. ಏಕೆಂದರೆ ಅಯೋಧ್ಯೆಯಲ್ಲಿ ಅಷ್ಟೊಂದು ಬುಕ್ಕಿಂಗ್ ಆಗುತ್ತಿಲ್ಲ. ಹೋಟೆಲ್ ದರವೂ ದುಬಾರಿಯಾಗುತ್ತಿದೆ ಎಂದರು.
ಮಾರ್ಚ್ ನಂತರ ಬುಕ್ಕಿಂಗ್ ಗೆ ಮನವಿ: ಮಾರ್ಚ್ ತನಕ ಬಹುತೇಕ ಎಲ್ಲ ಬುಕ್ಕಿಂಗ್ಗಳು ಭರ್ತಿಯಾಗಿವೆ ಎಂದ ಸಂತೋಷ್ ಸಿಂಗ್, ಮಾರ್ಚ್ ನಂತರ ಅಯೋಧ್ಯೆಗೆ ಹೋಗಲು ಯೋಜನೆ ರೂಪಿಸುವಂತೆ ನಾವು ಎಲ್ಲ ಜನರಿಗೆ ಮನವಿ ಮಾಡುತ್ತಿದ್ದೇವೆ. ದೇಶಿಯ ಪ್ರವಾಸಿಗರಿಗೆ ಹಾಗೂ ವಿದೇಶಿ ಪ್ರವಾಸಿಗರಿಗೆ ಈ ಮನವಿ ಮಾಡುತ್ತಿದ್ದೇವೆ. ಮಾರ್ಚ್ ನಂತರ ಜನರು ಅಯೋಧ್ಯೆಗೆ ಹೋಗಲು ಯೋಜಿಸಿದರೆ, ಅವರು ತಮ್ಮ ಬಜೆಟ್‌ನಲ್ಲಿ ಅಲ್ಲಿ ತಂಗಲು ಉತ್ತಮ ವ್ಯವಸ್ಥೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ವಿದೇಶಿ ಅತಿಥಿಗಳು ಯಾವುದೇ ಜನಸಂದಣಿಯಿಲ್ಲದೆ ಅಯೋಧ್ಯೆಗೆ ಸುಲಭವಾಗಿ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದರು.