ರಾಮ್‌ಗಢ್ (ಜಾರ್ಖಂಡ್): ಕಳೆದ ತಿಂಗಳಿನಿಂದ ಮೀಥೇನ್ ಅನಿಲ ಭಾರಿ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದ್ದು, ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಭೂಮಿಯಿಂದ ಬೆಂಕಿ ಬರುತ್ತಿರುವ ಘಟನೆ ಮಾಂಡು ಬ್ಲಾಕ್‌ನ ಲಿಯಾವೊ ಗ್ರಾಮದಲ್ಲಿ ಕಂಡು ಬಂದಿದೆ.
ಭೂಮಿಯಿಂದ ಹೊರ ಹೊಮ್ಮುತ್ತಿರುವ ಬೆಂಕಿ ವಸತಿ ಪ್ರದೇಶಗಳಾದ ದುಧಿಬಂಧದಿಂದ ಕರ್ಮಲಿ ತೋಲಾವರೆಗೆ ಹರಡುತ್ತಿದೆ. ಅನಿಲ ಸೋರಿಕೆಯಾಗುತ್ತಿರುವುದರ ಬಗ್ಗೆ ಗಮನಕ್ಕೆ ತಂದ್ರೂ ಜಿಲ್ಲಾಡಳಿತ ತಮ್ಮ ದೂರುಗಳನ್ನು ಕಡೆಗಣಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ನ ವ್ಯವಸ್ಥಾಪಕರ ಪ್ರಕಾರ, ಜೆಸಿಬಿಯ ಸಹಾಯದಿಂದ ಭೂಮಿಯಿಂದ ಹೊರ ಬರುತ್ತಿರುವ ಬೆಂಕಿಯನ್ನು ನಂದಿಸಲು ಪ್ರಯತ್ನಿಸಲಾಯಿತು. ಅಲ್ಲದೆ, ಅನಿಲ ಸೋರಿಕೆ ಮತ್ತು ಭೂಮಿಯಿಂದ ಹೊರ ಬರುತ್ತಿರುವ ಬೆಂಕಿಯ ಸ್ಥಳವನ್ನು ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಯಾದ ಸಿಸಿಎಲ್ ವಶಪಡಿಸಿಕೊಂಡಿದೆ ಎಂದು ಹೇಳಿದರು.
ಈ ಬಗ್ಗೆ ಮಾಂಡು ಬ್ಲಾಕ್‌ನ ಬಿಡಿಒ ವಿನಯ್ ಕುಮಾರ್ ಹೇಳಿಕೆ ಪ್ರಕಾರ, ಈ ವಿಷಯವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಬೆಂಕಿ ಮತ್ತು ಅನಿಲ ಸೋರಿಕೆಯನ್ನು ತಡೆಯುವ ಪ್ರಯತ್ನಗಳು ವಿಫಲವಾದ ಕಾರಣ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
2004 ರಲ್ಲಿ, ಮೀಥೇನ್ ಅನಿಲ ಸೋರಿಕೆಯಿಂದಾಗಿ ಈ ಪ್ರದೇಶದಲ್ಲಿ 8 ಕಾರ್ಮಿಕರು ಸಾವನ್ನಪ್ಪಿದ್ದರು.