ಪ್ರಯಾಗ್ ರಾಜ್/ ವಾರಾಣಸಿ : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭ ಜರುಗಲು ಇನ್ನೊಂದು ತಿಂಗಳು ಬಾಕಿ ಇದ್ದು, ಈಗಾಗಲೇ ಶ್ರೀರಾಮ ಮತ್ತು ಹನುಮಾನ್ ಧ್ವಜಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಿಂದೂ ಸಂಘಟನೆಗಳು, ವಸತಿ ಕಾಲೋನಿಗಳು, ಅಪಾರ್ಟ್ಮೆಂಟ್ಗಳು ಮತ್ತು ಖಾಸಗಿ ವ್ಯಕ್ತಿಗಳು ಶ್ರೀ ರಾಮ ಮತ್ತು ಅಯೋಧ್ಯೆಯ ಚಿತ್ರ ಇರುವ ಕೇಸರಿ ಧ್ವಜಗಳನ್ನು ತಯಾರಿಸಿ ಕೊಡುವಂತೆ ಧ್ವಜ ಮತ್ತು ಬ್ಯಾನರ್ ತಯಾರಿಸುವ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದ ಆರ್ಡರ್ ನೀಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ವಾರಾಣಸಿಯ ಪ್ರಮುಖ ವ್ಯಾಪಾರಿ ಸೂರತ್ ರಾಮ್, ಈಗಾಗಲೇ ನಮಗೆ ಶ್ರೀ ರಾಮ್ ಮತ್ತು ಹನುಮಾನ್ ಚಿತ್ರ ಇರುವ 50 ಸಾವಿರ ಧ್ವಜ ತಯಾರಿಸಿ ಕೊಡುವಂತೆ ಆರ್ಡರ್ ಬಂದಿದೆ. ಮುಂದಿನ ಕೆಲ ದಿನಗಳಲ್ಲಿ ಸುಮಾರು ಮೂರು ಲಕ್ಷ ಧ್ವಜದ ಆರ್ಡರ್ ಬರುವ ನಿರೀಕ್ಷೆಯಿದೆ. ಜನವರಿಯಲ್ಲಿ ನಗರ ಮತ್ತು ಪಕ್ಕದ ಜಿಲ್ಲೆಗಳಿಂದಲೂ ಆರ್ಡರ್ ಬರಲಿವೆ ಎಂದು ಹೇಳಿದರು.
ಕೇಸರಿ ಬಣ್ಣದ ಶ್ರೀ ರಾಮ ಮುದ್ರಿತ ಧ್ವಜಗಳು ಮತ್ತು ಕೆಂಪು ಬಣ್ಣದ ಶ್ರೀ ಹನುಮಾನ್ ಧ್ವಜಗಳಿಗೆ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಎಂದು ಅವರು ಹೇಳಿದರು. ವಿಭಿನ್ನ ಗಾತ್ರ ಮತ್ತು ಆಕಾರದ ಧಾರ್ಮಿಕ ಧ್ವಜಗಳಿಗೆ ಬೇಡಿಕೆ ಬರುತ್ತಿದೆ. ಬೇಡಿಕೆ ನಿಭಾಯಿಸಲು ನಾವು ಹೆಚ್ಚಿನ ಟೈಲರ್ ಗಳನ್ನು ನೇಮಿಸಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು.
ಏತನ್ಮಧ್ಯೆ, ವಿಶ್ವ ಹಿಂದೂ ಪರಿಷತ್ (ಕಾಶಿ ಪ್ರಾಂತ್) ಅಧಿಕಾರಿಗಳು ಪ್ರಯಾಗ ರಾಜ್ನ ಎಲ್ಲ ದೇವಾಲಯಗಳು ಮತ್ತು ಮನೆಗಳ ಮೇಲೆ 10 ಸಾವಿರ ಕೇಸರಿ ಧ್ವಜಗಳನ್ನು ಹಾರಿಸುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವಿಎಚ್ಪಿ (ಕಾಶಿ ಪ್ರಾಂತ) ಅಧ್ಯಕ್ಷ ಕೆ.ಪಿ. ಸಿಂಗ್, "ಜನವರಿ 22 ರಂದು ತಮ್ಮ ತಮ್ಮ ಮನೆಗಳ ಮೇಲೆ ಕೇಸರಿ ಧ್ವಜ ಅಥವಾ ಶ್ರೀ ರಾಮ ಹನುಮಾನ್ ಧ್ವಜಗಳನ್ನು ಸ್ಥಾಪಿಸುವಂತೆ ನಾವು ಹಿಂದೂ ಸಮುದಾಯದ ಜನರಿಗೆ ಮನವಿ ಮಾಡುತ್ತಿದ್ದೇವೆ. ನಾವು ಕೂಡ ಭಕ್ತರಿಗೆ ಧ್ವಜಗಳನ್ನು ವಿತರಿಸುತ್ತೇವೆ" ಎಂದು ಹೇಳಿದರು.
ವಿಎಚ್ಪಿ ಹೊರತಾಗಿ, ಆರ್ಎಸ್ಎಸ್ ಮತ್ತು ಇತರ ಹಿಂದೂ ಮುಂಚೂಣಿ ಸಂಘಟನೆಗಳ ಸ್ವಯಂಸೇವಕರು ಸಹ ರಾಮ ದೇವಾಲಯದ ಪ್ರತಿಷ್ಠಾಪನಾ ದಿನದಂದು ಪ್ರತಿಯೊಬ್ಬ ಹಿಂದೂ ಸಮುದಾಯದ ಸದಸ್ಯರ ಮನೆಯಲ್ಲಿ ಧ್ವಜವನ್ನು ಹಾರಿಸುವ ಉದ್ದೇಶದಿಂದ ಭಕ್ತರಿಗೆ ಧ್ವಜಗಳನ್ನು ವಿತರಿಸಲು ನಿರ್ಧರಿಸಿದ್ದಾರೆ. ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆ ಭಾರತದ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ತಾಣವಾಗಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರದ ನಿರ್ಮಾಣವಾಗುತ್ತಿದೆ. 2024 ರ ಜನವರಿ 22 ರಂದು ರಾಮ ಮಂದಿರದ ಭವ್ಯ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ.
ಇದನ್ನೂ ಓದಿ : ಚಂದ್ರಯಾನ್-3: ಈ ವರ್ಷದ ಟಾಪ್ ಟ್ರೆಂಡಿಂಗ್ ಯೂಟ್ಯೂಬ್ ವೀಡಿಯೊ