ಸಿರ್ಸಾ(ಹರಿಯಾಣ): ಹರಿಯಾಣದ ಹಿಸಾರ್‌ನ ಶಾಹೀದ್ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾ ಕಿಸಾನ್ ಪಂಚಾಯತ್‌ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸದಸ್ಯ ಮತ್ತು ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಇತರ ರೈತರು ಇಂದು ಭಾಗವಹಿಸಿದ್ದರು. ರೈತರ ವಿರುದ್ಧ ಹೆಚ್ಚುತ್ತಿರುವ ದೇಶದ್ರೋಹ ಪ್ರಕರಣಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು.
ಮಹಾಪಂಚಾಯತ್ ನಂತರ ರೈತರು ಸಿರ್ಸಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದರು. ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು, ಪೊಲೀಸ್ ಆಡಳಿತವು ಮಿನಿ ಸೆಕ್ರೆಟರಿಯಟ್ ಮುಂದೆ ಮೂರು ಪದರಗಳ ಬ್ಯಾರಿಕೇಡ್ ಹಾಕಿ ಭದ್ರತೆ ಹೆಚ್ಚಿಸಿದೆ. ಈ ಪ್ರದರ್ಶನ ಶಾಂತಿಯುತವಾಗಿ ನಡೆಯಲಿದೆ ಎಂದು ರೈತ ಮುಖಂಡರು ಪ್ರತಿಪಾದಿಸಿದರು.
ಇದಕ್ಕೂ ಮೊದಲು ಜುಲೈ 11ರಂದು ಹರಿಯಾಣದ ಉಪ ಸ್ಪೀಕರ್ ರಣಬೀರ್ ಗಂಗ್ವಾ ಅವರು ಹರಿಯಾಣದ ಸಿರ್ಸಾ ಜಿಲ್ಲೆಯ ಚೌಧರಿ ದೇವಿ ಲಾಲ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಯಿತು. ಕಾರ್ಯಕ್ರಮದ ನಂತರ ಡೆಪ್ಯೂಟಿ ಸ್ಪೀಕರ್ ಮತ್ತು ಇತರ ಬಿಜೆಪಿ ನಾಯಕರು ಹಿಂದಿರುಗುತ್ತಿದ್ದಾಗ ರೈತರು ಅವರ ಬೆಂಗಾವಲು ನಿಲ್ಲಿಸಿ ಕಲ್ಲು ತೂರಾಟ ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ.
ರೈತರು ಡೆಪ್ಯೂಟಿ ಸ್ಪೀಕರ್ ವಾಹನದ ಗಾಜನ್ನು ಒಡೆದರು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಸಿರ್ಸಾ ಪೊಲೀಸರು 100ಕ್ಕೂ ಹೆಚ್ಚು ರೈತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಓದಿ: ಪಂಜಾಬ್ ಕಾಂಗ್ರೆಸ್ ಜಟಾಪಟಿ: ಅಧ್ಯಕ್ಷ ಪಟ್ಟಕ್ಕಾಗಿ ಸಾಲು ಸಾಲು ನಾಯಕರ ಭೇಟಿಯಾದ ಸಿಧು