ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನದ ರಾಜ್ಯಸಭೆ ಕಲಾಪವನ್ನು ಕೊನೆಗೊಳಿಸಲು ಸರ್ಕಾರ ಕರೆದಿದ್ದ ಸಭೆಯನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಇಂದು ಬೆಳಗ್ಗೆ ನಡೆದ ವಿರೋಧ ಪಕ್ಷಗಳ ಸಭೆಯ ಬಳಿಕ ಈ ನಿರ್ಧಾರ ಕೈಗೊಂಡಿವೆ.
ಈ ಬಗ್ಗೆ ಮಾಹಿತಿ ನೀಡಿದ ಶಿವಸೇನಾ ಸಂಸದ ಸಂಜಯ್ ರಾವತ್, ನಾವು ಸರ್ಕಾರ ಕರೆದಿರುವ ಸಭೆಗೆ ಹಾಜರಾಗುವುದಿಲ್ಲ. ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ರಾಜೀನಾಮೆ ಮತ್ತು ರಾಜ್ಯಸಭೆಯಲ್ಲಿ 12 ಪ್ರತಿಪಕ್ಷಗಳ ಸಂಸದರ ಅಮಾನತು ರದ್ದುಗೊಳಿಸುವಂತೆ ನಾವು ಒತ್ತಾಯಿಸುತ್ತೇವೆ. ನಾವು ಸಂಸತ್ತಿನ ಎರಡೂ ಸದನಗಳು ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಲಖೀಂಪುರ ಖೇರಿ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ 12 ಸಂಸದರ ಅಮಾನತು ಹಾಗೂ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ರಾಜೀನಾಮೆಗೆ ಬೇಡಿಕೆ ಹಾಗೂ ಮುಂದಿನ ಕಾರ್ಯತಂತ್ರವನ್ನು ರೂಪಿಸಲು ಕರೆದಿರುವ ಸಭೆಯಲ್ಲಿ ಭಾಗವಹಿಸುವ ಬಗ್ಗೆ ವಿಪಕ್ಷ ನಾಯಕರು ಚರ್ಚೆ ನಡೆಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರ ಆಹ್ವಾನದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಎಲ್ಲ ವಿರೋಧ ಪಕ್ಷಗಳ ಬದಲಿಗೆ ಅಮಾನತುಗೊಂಡಿರುವ ನಾಲ್ಕು ಪಕ್ಷಗಳನ್ನು ಮಾತ್ರ ಕರೆದಿರುವ ಕೇಂದ್ರದ ಕ್ರಮವನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಪ್ರಶ್ನಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಸಚಿವ ಸಂಪುಟದ ಹಿರಿಯ ಸಚಿವರೊಂದಿಗೆ ಸಭೆ ನಡೆಸಿ ವಿವಿಧ ವಿಷಯಗಳು ಮತ್ತು ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದ್ದಾರೆ. ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ನರೇಂದ್ರ ಸಿಂಗ್ ತೋಮರ್, ಕಿರಣ್ ರಿಜಿಜು ಸೇರಿದಂತೆ ಕೇಂದ್ರ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಒಮಿಕ್ರಾನ್ ಹರಡದಂತೆ ಮಕ್ಕಳಿಗೆ ಪೋಷಕರು ಲಸಿಕೆ ಹಾಕಿಸಬೇಕು : ಇಸ್ರೇಲಿ ಪ್ರಧಾನಿ