ನವದೆಹಲಿ : ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮ್ಮ ಅಲ್ಪಾವಧಿಯ ರಾಜಕೀಯ ಜೀವನದಲ್ಲಿ ಅಸಂಖ್ಯಾತ ಸಾಧನೆಗಳನ್ನು ಮಾಡಿದ್ದಾರೆ. ಆದರೆ, ಅವರ ರಾಜಕೀಯ ಜೀವನವು ಅತ್ಯಂತ ಕ್ರೂರವಾದ ರೀತಿಯಲ್ಲಿ ಕೊನೆಗೊಂಡಿತು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬೇಸರ ಹೊರಹಾಕಿದ್ದಾರೆ.
25ನೇ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, "ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜಕೀಯ ಜೀವನ ಅತ್ಯಂತ ಕ್ರೂರ ರೀತಿಯಲ್ಲಿ ಅಂತ್ಯಗೊಂಡಿತು. ಆದರೆ, ಅವರು ಅಲ್ಪಾವಧಿಯಲ್ಲಿ ಮಾಡಿದ ಹಲವಾರು ಸಾಧನೆಗಳನ್ನು ಇಂದಿಗೂ ಮರೆಯುವಂತಿಲ್ಲ. ಮಹಿಳಾ ಸಬಲೀಕರಣ ಸೇರಿದಂತೆ ದೇಶ ಸೇವೆಯಲ್ಲಿಯೇ ಸಮಯ ಕಳೆದಿದ್ದಾರೆ" ಎಂದು ಹೇಳಿದರು.
ರಾಜೀವ್ ಗಾಂಧಿ ಅವರು ದೇಶದ ವೈವಿಧ್ಯತೆಯ ಬಗ್ಗೆ ಬಹಳ ಸಂವೇದನಾಶೀಲರಾಗಿದ್ದರು. ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಿಕ್ಕ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಮಹಿಳಾ ಸಬಲೀಕರಣ, ಪಂಚಾಯತ್ ಮತ್ತು ಪುರಸಭೆಗಳಲ್ಲಿ 1/3 ಮಹಿಳಾ ಮೀಸಲಾತಿಗಾಗಿ ಹೋರಾಟ ಮಾಡಿದ್ದರು. ಇಂದು 15 ಲಕ್ಷಕ್ಕೂ ಹೆಚ್ಚು ಚುನಾಯಿತ ಮಹಿಳಾ ಪ್ರತಿನಿಧಿಗಳು ಗ್ರಾಮೀಣ ಮತ್ತು ನಗರ ಸಂಸ್ಥೆಗಳಲ್ಲಿ ಇದ್ದಾರೆ ಎಂದರೆ, ಅದು ಸಾಧ್ಯವಾಗಿದ್ದು ರಾಜೀವ್ ಗಾಂಧಿಯವರ ಕಠಿಣ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಮಾತ್ರ ಎಂದು ಬಣ್ಣಿಸಿದರು.
ಇದನ್ನೂ ಓದಿ : ಲಡಾಕ್‌ನ ಪ್ಯಾಂಗೊಂಗ್ ತ್ಸೋ ತೀರದಲ್ಲಿ ತಂದೆಗೆ ರಾಹುಲ್ ಗಾಂಧಿ ನಮನ - ವಿಡಿಯೋ
"ಸಮಾಜದಲ್ಲಿ ದ್ವೇಷ, ಬಿರುಕು, ಮತಾಂಧತೆ ಮತ್ತು ಪಕ್ಷಪಾತದ ರಾಜಕಾರಣವನ್ನು ಹುಟ್ಟುಹಾಕುವ ಶಕ್ತಿಗಳು ಹೆಚ್ಚು ಸಕ್ರಿಯವಾಗುತ್ತಿರುವ ಇಂದಿನ ದಿನಗಳಲ್ಲಿ ಕೋಮು ಸೌಹಾರ್ದತೆ, ಶಾಂತಿ ಮತ್ತು ರಾಷ್ಟ್ರೀಯ ಏಕತೆಯ ಆದರ್ಶಗಳು ಹೆಚ್ಚು ಮಹತ್ವ ಉಳ್ಳದ್ದಾಗಿವೆ. ಧಾರ್ಮಿಕ, ಜನಾಂಗೀಯ, ಭಾಷೆ ಮತ್ತು ಸಂಸ್ಕೃತಿಯನ್ನು ಆಚರಿಸುವ ಮೂಲಕ ಭಾರತದ ಏಕತೆಯನ್ನು ಬಲಪಡಿಸಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ : ರಾಜೀವ್ ಗಾಂಧಿ 79ನೇ ಜನ್ಮದಿನ : 'ವೀರ ಭೂಮಿ'ಗೆ ಸೋನಿಯಾ, ಪ್ರಿಯಾಂಕಾ, ಖರ್ಗೆ ಪುಷ್ಪ ನಮನ
ರಾಜೀವ್ ಗಾಂಧಿ ಬಗ್ಗೆ..: 1984 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಬಳಿಕ ರಾಜೀವ್ ಗಾಂಧಿ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡರು. ಬಳಿಕ, ಅಕ್ಟೋಬರ್ 1984 ರಲ್ಲಿ 40 ನೇ ವಯಸ್ಸಿನಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಭಾರತದ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಡಿಸೆಂಬರ್ 2, 1989 ರವರೆಗೆ ಪಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.
1944 ರ ಆಗಸ್ಟ್ 20 ರಂದು ಬಾಂಬೆಯಲ್ಲಿ ಜನಿಸಿದ ರಾಜೀವ್ ಗಾಂಧಿ ಅವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾದರು.
ಇದನ್ನೂ ಓದಿ : ಭಾರತದ ಒಂದಿಂಚು ಭೂಮಿಯನ್ನೂ ಚೀನಾ ಆಕ್ರಮಿಸಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು : ರಾಹುಲ್ ಗಾಂಧಿ