ಆಲ್ವಾರ್(ರಾಜಸ್ಥಾನ): ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಇತ್ತೀಚೆಗಷ್ಟೇ 5ನೇ ತಲೆಮಾರಿನ (5ಜಿ) ಅಂತರ್ಜಾಲ ಸೇವೆಯನ್ನು ಪರಿಚಯಿಸಲಾಗಿದೆ. ಇಂತಹ ಅತ್ಯಾಧುನಿಕ ಕಾಲದಲ್ಲೂ ರಾಜಸ್ಥಾನದ 68 ಹಳ್ಳಿಗಳು ಇನ್ನೂ ಸಾಮಾನ್ಯ ಮೊಬೈಲ್ ನೆಟ್‌ವರ್ಕ್ ಸೇವೆಯನ್ನೂ ಪಡೆದಿಲ್ಲ ಎಂಬುದು ಸೋಜಿಗದ ಸಂಗತಿ. ಇಲ್ಲಿನ ಜನರು ಮೊಬೈಲ್ನಲ್ಲಿ ಮಾತನಾಡಲು ಮರ, ಗುಡ್ಡ, ಎತ್ತರದ ಪ್ರದೇಶವನ್ನು ಅವಲಂಬಿಸಿದ್ದಾರೆ ಎಂದರೆ ನೀವು ನಂಬಲೇಬೇಕು.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನರು ತಮ್ಮ ಬಂಧುಗಳೊಂದಿಗೆ ಮಾತನಾಡಬೇಕಾದರೆ ಮೊಬೈಲ್ ಹಿಡಿದು ಸರಸರನೇ ಮರ ಹತ್ತುತ್ತಾರೆ. ಅದೃಷ್ಟ ಸರಿ ಇದ್ದು ನೆಟ್‌ವರ್ಕ್ ತಾಗಿದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಇಲ್ಲೊಂದು ದೊಡ್ಡ ಸಮಸ್ಯೆಯೇ ಇದೇ. ಮೊಬೈಲ್ನಲ್ಲಿ ಮಾತನಾಡುತ್ತಾ ಮೈಮರೆತು ಅಪ್ಪಿತಪ್ಪಿ ಕಾಲುಜಾರಿ ಬಿದ್ದಲ್ಲಿ ಶಿವನ ಪಾದ ಸೇರೋದು ಗ್ಯಾರಂಟಿ.
ಇಲ್ಲಿಲ್ಲ ಡಿಜಿಟಲ್ ಇಂಡಿಯಾ ಪ್ರಭಾವ: ನೆಟ್‌ವರ್ಕ್ ಇಲ್ಲದ ಗ್ರಾಮಗಳು ಅಲ್ವಾರ್ ಜಿಲ್ಲಾ ಕೇಂದ್ರದಿಂದ 15 ಕಿಮೀನಷ್ಟು ದೂರದಲ್ಲಿವೆ. ಅಖ್ಬರ್‌ಪುರ, ಕಲಿಖೋರ್ ಗ್ರಾಮದಲ್ಲಿ ಇಂದಿಗೂ ಮರವೇರಿ ಮೊಬೈಲ್ನಲ್ಲಿ ಮಾತನಾಡಬೇಕಿದೆ. ಕೆಲವೊಮ್ಮೆ ಅದೂ ಸಾಧ್ಯವಾಗದೇ ಊರಿಂದ 2 ಕಿಮೀ ದೂರ ಕ್ರಮಿಸಿ ಮೊಬೈಲ್ ಬಳಸಬೇಕು. ಇವೆರಡೇ ಗ್ರಾಮವಲ್ಲದೇ ಸುತ್ತಲಿನ 68 ಹಳ್ಳಿಗಳೂ ಈ ಶಾಪಕ್ಕೀಡಾಗಿವೆ.
ಆನ್ಲೈನ್ ಸೇವೆಯೇ ಜನರಿಗೆ ಮರೀಚಿಕೆ: ಇಲ್ಲಿನ ಜನರಿಗೆ ಆನ್ಲೈನ್ನಲ್ಲಿ ನಡೆಯುವ ಎಲ್ಲ ಸೇವೆಗಳು ಮರೀಚಿಕೆಯಾಗಿವೆ. ಪಡಿತರ ಪಡೆಯಲು, ಮಕ್ಕಳು ಅಂತರ್ಜಾಲದ ಸಹಾಯದಿಂದ ಮಾಹಿತಿ ಸೇರಿದಂತೆ ಯಾವೊಂದಕ್ಕೂ ಇಲ್ಲಿ ಅವಕಾಶವಿಲ್ಲ. ಸರ್ಕಾರಿ ಆರೋಗ್ಯ ಕೇಂದ್ರಗಳೂ ನೆಟ್‌ವರ್ಕ್ ಇಲ್ಲದೇ ಸೊರಗಿವೆ.
ಸರ್ಕಾರದ ಮೊಬೈಲ್ ಭಾಗ್ಯಕ್ಕಿಲ್ಲ ಕಿಮ್ಮತ್ತು: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಜೆಟ್ನಲ್ಲಿ ಘೋಷಿಸಿದಂತೆ ಮಹಿಳೆಯರಿಗೆ ಸ್ಮಾರ್ಟ್ಫೋನ್ ನೀಡಲು ಹೊರಟಿದೆ. ಇದರ ಮೂಲಕ ಸರ್ಕಾರದ ಎಲ್ಲ ಯೋಜನೆಗಳು ಬೆರಳತುದಿಯಲ್ಲೇ ಸಿಗುತ್ತವೆ ಎಂಬುದು ಸರ್ಕಾರದ ಆಶಯ. ಆದರೆ, ನೆಟ್ವರ್ಕೇ ಇಲ್ಲದ ಈ ಊರುಗಳಲ್ಲಿ ಮೊಬೈಲ್ ಬಂದರೇನು ಫಲ ಎಂಬುದು ಜನರ ಪ್ರಶ್ನೆಯಾಗಿದೆ.
5G ಯುಗದಲ್ಲಿ 4G ಬಗ್ಗೆ ಚರ್ಚೆ: ಈ ಗಂಭೀರ ಸಮಸ್ಯೆಯ ಬಗ್ಗೆ ಸರ್ಕಾರದ ಒಡೆತನಲ್ಲಿರುವ ಬಿಎಸ್ಎನ್ಎಲ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ ನೀಡುವ ಉತ್ತರವೇ ಬಾಲಿಶವಾಗಿದೆ. ಸರ್ಕಾರ ಅಲ್ವಾರ್ ಜಿಲ್ಲೆಯ 68 ಗ್ರಾಮಗಳನ್ನು ಗುರುತಿಸಿದೆ. ಮುಂದಿನ ದಿನಗಳಲ್ಲಿ ಅಲ್ಲಿ ನೆಟ್‌ವರ್ಕ್ ಸಂಪರ್ಕ ಕೊಡಿಸಲಾಗುವುದು. ಈಗಾಗಲೇ ಕೆಲಸವೂ ಆರಂಭವಾಗಿದೆ. ಒಂದೂವರೆ ಎರಡು ವರ್ಷಗಳ ನಂತರ ಜನರಿಗೆ 4ಜಿ ನೆಟ್‌ವರ್ಕ್ ಸೌಲಭ್ಯ ಸಿಗಲಿದೆ ಎಂದು ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವಿಶ್ವದ ಸಮಬಲವಾಗಿ ಬೆಳೆಯಬೇಕೆಂದು 5G ನೆಟ್‌ವರ್ಕ್ ಪರಿಚಯಿಸಿದ್ದಾರೆ. ಆದರೆ ರಾಜಸ್ಥಾನದ ಈ ಗ್ರಾಮಗಳು ಮಾತ್ರ 4 ಜಿ ಸೇವೆಯಲ್ಲೇ ಉಳಿಯಬೇಕಿದೆ.
ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂಗೆ ಕೇಂದ್ರದ ಪ್ರತಿಕ್ರಿಯೆ