ಜೈಪುರ (ರಾಜಸ್ಥಾನ): ಪಾಕಿಸ್ತಾನದ ಯುವತಿಯೊಬ್ಬಳು ರಾಜಸ್ಥಾನದ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಯುವಕರೊಂದಿಗೆ ಶುಕ್ರವಾರ ಸಿಕ್ಕಿ ಬಿದ್ದಿದ್ದಾರೆ. ಈ ಯುವತಿಯ ಬಳಿ ಪಾಸ್‌ಪೋರ್ಟ್ ಹಾಗೂ ವೀಸಾ ಇರದೇ ಇರುವುದು ಗೊತ್ತಾಗಿದ್ದು, ಕಳೆದ ಮೂರು ವರ್ಷಗಳಿಂದಲೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಬಯಲಾಗಿದೆ. ಹೀಗಾಗಿ ಆರೋಪಿ ಯುವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಪಾಕಿಸ್ತಾನದ ಮೂಲದ ಗಜಲ್ ಎಂಬಾಕೆಯೇ ಬಂಧಿತ ಯುವತಿ ಎಂದು ಗುರುತಿಸಲಾಗಿದೆ. ಈಕೆ ಸಿಕಾರ್ ಜಿಲ್ಲೆಯ ಶ್ರೀಮಧೋಪುರದಲ್ಲಿ ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು. ಆದರೆ, ಇತ್ತೀಚೆಗೆ ಚಿಕ್ಕಮ್ಮನೊಂದಿಗೆ ಕಲಹ ಉಂಟಾದ ಕಾರಣಕ್ಕೆ ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದಳು. ಇದಕ್ಕಾಗಿ ಶುಕ್ರವಾರ ಇಬ್ಬರು ಯುವಕರೊಂದಿಗೆ ಈ ಯುವತಿ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಳು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ISI ಬಗ್ಗೆ ನಾನು ಕೇಳಿಯೇ ಇಲ್ಲ.. ಸೀಮಾ ಹೈದರ್‌ಗೆ ATS ಕೇಳಿದ 13 ಪ್ರಶ್ನೆಗಳು ಹಾಗೂ ಆಕೆ ಕೊಟ್ಟ ಉತ್ತರ ಇಲ್ಲಿದೆ..
ಪಾಕಿಸ್ತಾನಕ್ಕೆ ಹೋಗುವ ವಿಮಾನದ ಬಗ್ಗೆ ಯುವತಿಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಇಬ್ಬರು ಯುವಕರ ಸಹಾಯ ಪಡೆದಿದ್ದಳು. ಅಂತೆಯೇ, ಈ ಯುವಕರು ಆಕೆಯನ್ನು ಜೈಪುರ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದರು. ಪಾಕಿಸ್ತಾನಕ್ಕೆ ಟಿಕೆಟ್ ಖರೀದಿಸಲೆಂದು ಯುವತಿ ಟಿಕೆಟ್ ಕೌಂಟರ್ಗೆ ಹೋದಾಗ ಆಕೆಯ ಬಳಿ ಪಾಸ್‌ಪೋರ್ಟ್ ಆಗಲಿ, ವೀಸಾ ಆಗಲಿ ಹೊಂದಿರದೇ ಇರುವುದು ಬೆಳಕಿಗೆ ಬಂದಿದೆ.
ಈ ವೇಳೆ, ಯುವತಿಯ ಜೊತೆಗಿದ್ದ ಇಬ್ಬರೂ ಯುವಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ, ಯುವತಿಯನ್ನೂ ವಿಚಾರಣೆ ನಡೆಸಲು ಮುಂದಾಗ ಆಕೆ ಪಾಕಿಸ್ತಾನದ ಶೈಲಿಯಲ್ಲಿ ಮಾತನಾಡಿದ್ದಾಳೆ. ಇದರಿಂದ ಹೆಚ್ಚಿನ ವಿಚಾರಣೆ ನಡೆಸಿದಾಗ ಕಳೆದ 3 ವರ್ಷಗಳಿಂದ ಶ್ರೀಮಧೋಪುರದಲ್ಲಿ ತನ್ನ ಚಿಕ್ಕಮ್ಮನೊಂದಿಗೆ ವಾಸಿಸುತ್ತಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಇದೀಗ ಚಿಕ್ಕಮ್ಮನೊಂದಿಗೆ ಜಗಳವಾಗಿರುವುದರಿಂದ ತಾನು ಪಾಕಿಸ್ತಾನಕ್ಕೆ ಹೋಗಲು ಬಯಸಿದ್ದೆ ಎಂಬುವುದಾಗಿಯೂ ಬಹಿರಂಗ ಪಡಿಸಿದ್ದಾಳೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ದಿಗ್ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸೌದಿಯಲ್ಲಿ ಗಂಡ.. ಪಬ್ಜಿ ಗೇಮ್ ಪ್ರಿಯಕರನಿಗಾಗಿ ನಿವೇಶನ ಮಾರಿ ಭಾರತಕ್ಕೆ ಬಂದ ಪಾಕ್ ಮಹಿಳೆ ಪೊಲೀಸರ ಅತಿಥಿ!
ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೇ ಯುವತಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ ಮಾಹಿತಿ ತಿಳಿದ ತಕ್ಷಣ ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ವಿಮಾನ ನಿಲ್ದಾಣ ದೌಡಾಯಿಸಿದ್ದಾರೆ. ಸದ್ಯ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಆಕೆಯ ಪೂರ್ವಾಪರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಪಾಕಿಸ್ತಾನದ ಮೂಲದ ಸೀಮಾ ಹೈದರ್ ಎಂಬಾಕೆ ತನ್ನ ನಾಲ್ವರು ಮಕ್ಕಳೊಂದಿಗೆ ಪಬ್ಜಿ ಗೇಮ್ನಲ್ಲಿ ಪರಿಚಯವಾದ ಭಾರತದ ಸಚಿನ್ ಎಂಬಾತನಿಗಾಗಿ ಅಕ್ರಮವಾಗಿ ಬಂದಿದ್ದಾಳೆ. ಅದೇ ರೀತಿಯಾಗಿ ರಾಜಸ್ಥಾನದ ಎರಡು ಮಕ್ಕಳ ತಾಯಿ ಅಂಜು ಎಂಬಾಕೆ ಫೇಸ್ಬುಕ್ನಲ್ಲಿ ಪರಿಚಯವಾದ ಪಾಕಿಸ್ತಾನದ ನಸ್ರುಲ್ಲಾ ಎಂಬಾತನಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಈ ಘಟನೆಗಳು ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಇದರ ನಡುವೆ ಪಾಕಿಸ್ತಾನದ ಮೂಲದ ಗಜಲ್ ಕಳೆದ ಮೂರು ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಬಯಲಾಗಿದೆ.
ಇದನ್ನೂ ಓದಿ: Anju-Nasrullah Love Story: ಅಂಜುವನ್ನು ಒಪ್ಪಿಕೊಳ್ಳುವುದಿಲ್ಲ, ನನ್ನ ಮಕ್ಕಳೇ ನಿರ್ಧಾರ ತೆಗೆದುಕೊಳ್ತಾರೆ: ಪತಿ ಅರವಿಂದ್