ಚುರು(ರಾಜಸ್ಥಾನ): ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಯುವತಿಯರಿಬ್ಬರು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಾರೆ. ರಾಜಸ್ಥಾನದ ಚುರು ಜಿಲ್ಲೆಯ ರತನ್ಗಢದಲ್ಲಿ ಈ ಘಟನೆ ನಡೆದಿದೆ.
ಹರಿಯಾಣದ ಜಿಂದ್ನಲ್ಲಿ ವಾಸವಾಗಿದ್ದ ಯುವತಿ ಹಾಗೂ ರತನ್ಗಢದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಮತ್ತೊಬ್ಬ ಯುವತಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಇದರ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಅವರಿಗೆ ಕಾವಲು ಸಹ ಇರಿಸಲಾಗಿತ್ತು. ಆದರೆ, ಗಾಢವಾದ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಯಾರ ಮಾತನ್ನೂ ಕೇಳಲಿಲ್ಲ. ಕುಟುಂಬದವರ ಮಾತು ಧಿಕ್ಕರಿಸಿ, ಒಟ್ಟಿಗೆ ವಾಸಿಸುವ ನಿರ್ಧಾರವನ್ನೂ ಮಾಡಿದ್ದಾರೆ.
ಸಂಪೂರ್ಣ ವಿವರ:
ಒಂದು ವರ್ಷದ ಹಿಂದೆ ಹರಿಯಾಣದ 22 ವರ್ಷದ ಯುವತಿ ರತನ್ಗಢದಲ್ಲಿರುವ ತನ್ನ ಅತ್ತಿಗೆಯ ಮನೆಗೆ ಆಗಮಿಸಿದ್ದಳು. ಈಕೆಗೆ ಇಲ್ಲಿ ವಾಸವಾಗಿದ್ದ 18 ವರ್ಷದ ಅತ್ತಿಗೆಯ ಮಗಳೊಂದಿಗೆ ಸ್ನೇಹವಾಗಿದೆ. ಆ ಬಳಿಕ ಇಬ್ಬರು ಆಗಾಗ್ಗೆ ಭೇಟಿಯಾಗಿದ್ದು, ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು.
2021ರ ನವೆಂಬರ್ 12ರಂದು ರಾತ್ರಿ 18 ವರ್ಷದ ಹುಡುಗಿ ತನ್ನ ಮನೆಯಿಂದ ಓಡಿ ಬಂದು ಹರಿಯಾಣದ 22 ವರ್ಷದ ಹುಡುಗಿಯನ್ನು ಭೇಟಿಯಾಗಿದ್ದಾಳೆ. ಇದರ ಬೆನ್ನಲ್ಲೇ ಇಬ್ಬರೂ ಫತೇಹಾಬಾದ್ಗೆ ಹೋಗಿ ಮದುವೆಯಾಗಿದ್ದು, ಜಿಂದ್ನಲ್ಲಿ ಎರಡು ತಿಂಗಳ ಕಾಲ ಒಟ್ಟಿಗೆ ವಾಸವಾಗಿದ್ದರು.
ಹುಡುಗಿಯರಿಬ್ಬರು ಕಾಣೆಯಾಗಿರುವ ಬಗ್ಗೆ ನವೆಂಬರ್ 14ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ತದನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಯುವತಿಯರು ತಾವು ಒಟ್ಟಿಗೆ ಜೀವನ ನಡೆಸುವುದಾಗಿ ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಹೀಗಾಗಿ ಪೊಲೀಸ್ ಇಲಾಖೆ ಕೂಡ ಇವರನ್ನು ಬಿಟ್ಟು ಕಳುಹಿಸಿತು.