ಜೈಪುರ(ರಾಜಸ್ಥಾನ್): 'ಕಿಸಾನ್ ಮಿತ್ರ ಉರ್ಜಾ ಯೋಜನೆ'ಯಡಿ ರಾಜಸ್ಥಾನದ ರೈತರಿಗೆ ಮಾಸಿಕ 1,000 ರೂ. ನೀಡುವ ಯೋಜನೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶನಿವಾರ ಚಾಲನೆ ನೀಡಿದರು.
ರಾಜ್ಯದಲ್ಲಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಈ ಯೋಜನೆಯಿಂದ ಹೆಚ್ಚು ಉಪಯೋಗವಾಗಲಿದ್ದು, ರೈತರಿಗೆ ಆರ್ಥಿಕ ನೆರವು ನೀಡುವುದು ನಮ್ಮ ಯೋಜನೆಯ ಮುಖ್ಯ ಉದ್ದೇಶವಾಗಿದೆ. 'ಕಿಸಾನ್ ಮಿತ್ರ ಉರ್ಜಾ' ಯೋಜನೆಯಡಿ ರೈತರಿಗೆ ಮಾಸಿಕ 1,000 ರೂ. ನೀಡಲಾಗುವುದು. ಮತ್ತು ವಿದ್ಯುತ್ ದರ ಭರಿಸುವ ಸಲವಾಗಿ ವಾರ್ಷಿಕವಾಗಿ 1,450 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡಲಾಗುವುದು ಎಂದು ಸಿಎಂ ಹೇಳಿದರು.
ರೈತರಿಗೆ ವಿದ್ಯುತ್ ಒದಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಕೃಷಿ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 5.55 ರೂ. ಇದ್ದು, ಆದರೆ ರೈತರಿಗೆ ಪ್ರತಿ ಯೂನಿಟ್‌ಗೆ 90 ಪೈಸೆ ವಿಧಿಸಲಾಗುತ್ತಿದೆ. ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಕೃಷಿ ವಿದ್ಯುತ್ ದರಗಳಿಗೆ ಸಬ್ಸಿಡಿಯಿಂದಾಗಿ ಪ್ರತಿ ವರ್ಷ 16,000 ಕೋಟಿ ರೂ.ಗಳ ಆರ್ಥಿಕ ಹೊರೆ ರಾಜ್ಯ ಸರ್ಕಾರದ ಮೇಲಿದೆ. ಈಗ ರೈತರ ಕಲ್ಯಾಣಕ್ಕಾಗಿ 1,450 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಸಹ ಭರಿಸಲಾಗುವುದು ಎಂದು ಸಿಎಂ ತಿಳಿಸಿದರು.
ಸೌರಶಕ್ತಿ ನೀತಿ 2019 ಮತ್ತು ಪವನ ಶಕ್ತಿ ನೀತಿ 2019 ಮೂಲಕ ನವೀಕರಿಸಬಹುದಾದ ಇಂಧನದ ಕುರಿತು ರಾಜ್ಯ ಸರ್ಕಾರ ಗಮನ ಹರಿಸುತ್ತಿದೆ. ನಾವು 2025 ರ ವೇಳೆಗೆ 30,000 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಇಂಧನ ಸಚಿವ ಬಿ.ಡಿ. ಕಲ್ಲಾ ಮಾತನಾಡಿ, ರಾಜ್ಯಾದ್ಯಂತ ಹೊಸ ಎಲೆಕ್ಟ್ರಿಕ್ ಗ್ರಿಡ್, ಲೈನ್‌ಗಳು ಮತ್ತು ಸಬ್‌ಸ್ಟೇಷನ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ನೆಟ್‌ವರ್ಕ್ ಬಲಗೊಳ್ಳುತ್ತಿದೆ. ರಾಜ್ಯದ ದೂರದ ಪ್ರದೇಶಗಳಲ್ಲಿ 132 ಕೆವಿ ಮತ್ತು 33 ಕೆವಿ ಗ್ರಿಡ್ ಉಪಕೇಂದ್ರಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.