ಭರತ್‌ಪುರ (ರಾಜಸ್ಥಾನ): ಮಂಗಳವಾರ ರಾಜಸ್ಥಾನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಸೇರ್ಪಡೆಯಾಗಿದೆ. ಪೂರ್ವ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಅಟ್ಟಾರಿ ಎಂಬ ಪುಟ್ಟ ಗ್ರಾಮದ ನಿವಾಸಿ, ಶಾಸಕ ಭಜನ್‌ಲಾಲ್ ಶರ್ಮಾ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಗಿದೆ. ಭಜನ್‌ಲಾಲ್ ಶರ್ಮಾ ರೈತ ಕುಟುಂಬದಿಂದ ಬಂದಿದ್ದಾರೆ. ವಿದ್ಯಾರ್ಥಿ ನಾಯಕನ ಸ್ಥಾನದಿಂದ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆವರೆಗೆ ಅವರ ಪ್ರಯಾಣವು ಸ್ಫೂರ್ತಿದಾಯಕವಾಗಿದೆ.
ರಾಜಸ್ಥಾನ ನಿಯೋಜಿತ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ತಾಯಿ ಗೋಮತಿ ದೇವಿ ಈ ಕುರಿತು ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಭಜನ್‌ಲಾಲ್ ವಿದ್ಯಾರ್ಥಿಯಾಗಿದ್ದಾಗಿನಿಂದ ರಾಜಕೀಯಕ್ಕೆ ಪ್ರವೇಶಿಸಿದ್ದನ್ನು ಅವರ ತಾಯಿ ನೆನಪಿಸಿಕೊಂಡಿದ್ದಾರೆ. ''ತಮ್ಮ ಪುತ್ರ ಎಂದಿಗೂ ಉಗ್ಯೋಗ ಕೈಗೊಳ್ಳಲು ಬಯಸಲಿಲ್ಲ. ಯಾವಾಗಲೂ ಕೂಡ ರಾಜಕೀಯವೇ ಅವನ ಮೊದಲ ಆಯ್ಕೆ'' ಎಂದು ಅವರು ತಿಳಿಸಿದರು.
ರೈತ ಕುಟುಂಬದವರಾಗಿದ್ದರೂ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗಕ್ಕೆ ತಯಾರಿ ನಡೆಸಿಲಿಲ್ಲ. ''ಉದ್ಯೋಗಕ್ಕೆ ತಯಾರಿ ಮಾಡಿಕೊಳ್ಳಿ ಎಂದು ಭಜನ್‌ಲಾಲ್ ಅವರಿಗೆ ಹಲವು ಬಾರಿ ಹೇಳುತ್ತಿದ್ದೆವು. ಆದರೆ, ಚಿಂತಿಸಬೇಡಿ ಎಂದು ಅವರು ನಮಗೆ ಹೇಳುತ್ತಿದ್ದರು'' ಎಂದು ಗೋಮತಿದೇವಿ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.
ಭಜನ್ ಲಾಲ್ ಶರ್ಮಾ ಅವರು ಮತ ಚಲಾಯಿಸಿದ ಬಳಿಕ ಭರತ್‌ಪುರಕ್ಕೆ ಬಂದಿದ್ದರು. ತಂದೆ, ತಾಯಿಯ ಆಶೀರ್ವಾದವನ್ನು ಪಡೆದಿದ್ದರು. ಭಜನ್ ಲಾಲ್ ಶರ್ಮಾ ಅವರ ಮೇಲೆ ನಂಬಿಕೆ ಇಟ್ಟು ಸಿಎಂ ಹುದ್ದೆಗೆ ಆಯ್ಕೆ ಮಾಡಿರುವುದಕ್ಕೆ ಅವರ ತಾಯಿ ಗೋಮತಿ ದೇವಿ ಮತ್ತು ತಂದೆ ಕೃಷ್ಣ ಲಾಲ್ ಶರ್ಮಾ ಅವರು ಬಿಜೆಪಿ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
''ತಮ್ಮ ಮಗ ಈಗಲೂ ತಮ್ಮ ಗ್ರಾಮದೊಂದಿಗೆ ಸಂಪರ್ಕ ಹೊಂದಿದ್ದಾರೆ'' ಎಂದು ತಾಯಿ ಗೋಮತಿ ದೇವಿ ಭಾವುಕರಾಗಿ ಹೇಳಿದರು. ''ಗ್ರಾಮದಲ್ಲಿ ಇನ್ನೂ ಕೃಷಿ ಜಮೀನು ಇದೆ. ಅದರ ಬಗ್ಗೆ ಗಮನ ಹರಿಸಲು ಇಂದಿಗೂ ಪುತ್ರ ಭಜನ್‌ಲಾಲ್ ಶರ್ಮಾ ಆಗಾಗ್ಗೆ ಗ್ರಾಮಕ್ಕೆ ಭೇಟಿ ನೀಡುತ್ತಾರೆ'' ಎಂದು ತಿಳಿಸಿದರು.
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆಯಾಗಿರುವ ಸುದ್ದಿ ಹೊರಬಿದ್ದ ನಂತರ, ಅವರ ಬೆಂಬಲಿಗರು ಜವಾಹರ್ ನಗರದಲ್ಲಿರುವ ಅವರ ಮನೆಯ ಮುಂಭಾಗದಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಪಟಾಕಿಗಳನ್ನು ಸಿಡಿಸಿ, ಸಿಹಿ ಖುಷಿಪಟ್ಟಿದ್ದರು.
ಭಜನ್ ಲಾಲ್ ಶರ್ಮಾ ಇತ್ತೀಚೆಗೆ ನಡೆದ ರಾಜಸ್ಥಾನ ಚುನಾವಣೆಯಲ್ಲಿ ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಬಿಜೆಪಿಯು ಕಾಂಗ್ರೆಸ್ ಮಣಿಸಿ ಅಧಿಕಾರಕ್ಕೆ ಬಂದಿದೆ. 10 ದಿನಗಳೊಳಗೆ ಹೊಸ ಮುಖ್ಯಮಂತ್ರಿಯನ್ನು ಘೋಷಿಸಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಶಾಸಕರಾದ ಭಜನ್ ಲಾಲ್ ಶರ್ಮಾಗೆ ರಾಜಸ್ಥಾನದ ಮುಖ್ಯಮಂತ್ರಿ ಪಟ್ಟ!