ದುದು (ರಾಜಸ್ಥಾನ) : ಗುರುವಾರ ಕಾರಿನ ಮೇಲೆ ಟ್ಯಾಂಕರ್ ಟ್ರಕ್ ಪಲ್ಟಿಯಾದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಟ್ಟು ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುದು ಜಿಲ್ಲೆಯ ರಾಮನಗರ ಪ್ರದೇಶದ ಬಳಿ ಜೈಪುರ ಅಜ್ಮೇರ್ ಹೆದ್ದಾರಿಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಟ್ರಕ್‌ನ ಟೈರ್ ಒಡೆದು ಅದರ ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾದ ನಂತರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಒಬ್ಬ ವ್ಯಕ್ತಿ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಕಾರಿನಲ್ಲಿ ಒಟ್ಟು ಒಂಬತ್ತು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕಾರು ಫಾಗಿಯಿಂದ ಅಜ್ಮೇರ್‌ಗೆ ಹೋಗುತ್ತಿತ್ತು ಎಂದು ಜೈಪುರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: 24 ಗಂಟೆ ಅವಧಿಯಲ್ಲಿ 2ನೇ ಎನ್ಕೌಂಟರ್: ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಹತ್ಯೆ
ಈ ಮಧ್ಯೆ ತಮಿಳುನಾಡಿನ ಕಾಂಚೀಪುರಂನಲ್ಲಿ ತಮಿಳುನಾಡು ರಾಜ್ಯ ರಸ್ತೆ ಮಾರ್ಗದ ಬಸ್ ಇಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದರು. ಮಾಮಲ್ಲಪುರಂ ಸಮೀಪದ ಮನಮೈ ಗ್ರಾಮದ ಪೂರ್ವ ಕರಾವಳಿ ರಸ್ತೆಯಲ್ಲಿ ಮಧ್ಯಾಹ್ನ ಅಪಘಾತ ಸಂಭವಿಸಿದೆ. ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ (ಟಿಎನ್‌ಎಸ್‌ಟಿಸಿ) ಬಸ್ ಪುದುಚೇರಿಗೆ ತೆರಳುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮದುವೆಗೆ ತೆರಳುತ್ತಿದ್ದ ಒಂದೇ ಕುಟುಂಬದ 11 ಜನ ಸಾವು: ಇನ್ನೊಂದೆಡೆ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 11 ಜನರು ಸಾವನ್ನಪ್ಪಿದ ಘಟನೆ ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯ ಜಾಗತ್ರ ಎಂಬಲ್ಲಿ ಬೂಧವಾರ ರಾತ್ರಿ ನಡೆದಿತ್ತು. ಮೃತಪಟ್ಟವರಲ್ಲಿ ಐವರು ಮಹಿಳೆಯರು ಹಾಗು ಇಬ್ಬರು ಮಕ್ಕಳು ಸೇರಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು.
ಇದನ್ನೂ ಓದಿ : ಕಾರು ಗುದ್ದಿದ ರಭಸಕ್ಕೆ ಟಾಪ್ ಮೇಲೆಯೇ ಬಿದ್ದ ಬೈಕ್ ಸವಾರ: ಶವದೊಂದಿಗೆ 3 ಕಿಮೀ ಚಲಿಸಿದ ಆರೋಪಿ ಚಾಲಕ
ಘಟನೆಯ ವಿವರ: ಬುಧವಾರ ರಾತ್ರಿ(ನಿನ್ನೆ) ರುದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊರೆಮ್ ಗ್ರಾಮದ ಸಾಹು ಕುಟುಂಬ ಕಂಕೇರ್‌ನಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮಕ್ಕೆ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದರು. ಬಲೋದ್ನ ಜಾಗತ್ರ ಎಂಬಲ್ಲಿ ಸಂಚರಿಸುತ್ತಿದ್ದಾಗ ಎದುರಾದ ಟ್ರಕ್, ಬೊಲೆರೊಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಭಸಕ್ಕೆ ಬೊಲೆರೊ ಕೆಲವು ಮೀಟರ್ಗಳಷ್ಟು ದೂರ ಹಾರಿ ಬಿದ್ದಿದೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ 11 ಜನರ ಪೈಕಿ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಮೃತರೆಲ್ಲರೂ ಧಮ್ತಾರಿ ಜಿಲ್ಲೆಯ ಸೋರಂ ಭಟಗಾಂವ್ ನಿವಾಸಿಗಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೊಲೆರೊ-ಟ್ರಕ್ ಭೀಕರ ರಸ್ತೆ ಅಪಘಾತ: ಮದುವೆಗೆ ತೆರಳುತ್ತಿದ್ದ ಒಂದೇ ಕುಟುಂಬದ 11 ಜನ ಸಾವು!