ಮುಂಬೈ(ಮಹಾರಾಷ್ಟ್ರ): ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಶನಿವಾರ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಒಂದು ವೇಳೆ ಧ್ವನಿವರ್ಧಕಗಳನ್ನು ತೆಗೆಯದಿದ್ದರೆ, ಮಸೀದಿಗಳ ಮುಂದೆ ಧ್ವನಿವರ್ಧಕಗಳನ್ನು ಇಟ್ಟು ಹನುಮಾನ್ ಚಾಲೀಸಾ ನುಡಿಸುವ ಎಚ್ಚರಿಕೆ ನೀಡಿದ್ದಾರೆ.
ಮುಂಬೈನಲ್ಲಿ ಎಂಎನ್‌ಎಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ನಾನು ಮಸೀದಿಯಲ್ಲಿ ಮಾಡುವ ಪ್ರಾರ್ಥನೆಗೆ ವಿರೋಧಿಯಲ್ಲ. ಅವರವರ ಮನೆಯಲ್ಲಿಯೂ ಪ್ರಾರ್ಥನೆ ಮಾಡಬಹುದು. ಆದರೆ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಇಟ್ಟು ಹನುಮಾನ್ ಚಾಲೀಸಾ ಹಾಕುತ್ತೇವೆ ಎಂದು ಹೇಳಿದ್ದಾರೆ.
ಮುಂಬೈನ ಮುಸ್ಲಿಂ ಪ್ರದೇಶಗಳಲ್ಲಿರುವ ಮದರಸಾಗಳ ಮೇಲೆ ದಾಳಿ ಮಾಡುವಂತೆ ನಾನು ಪ್ರಧಾನಿ ಮೋದಿಗೆ ಮನವಿ ಮಾಡುತ್ತೇನೆ. ಪಾಕಿಸ್ತಾನಿ ಬೆಂಬಲಿಗರು ಈ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಮುಂಬೈ ಪೊಲೀಸರಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿದೆ. ಜನಪ್ರತಿನಿಧಿಗಳು ಅಲ್ಲಿನ ಜನರನ್ನು ಮತ ಬ್ಯಾಂಕ್‌ಗಾಗಿ ಬಳಸುತ್ತಿದ್ದಾರೆ. ಅಂತಹವರಿಗೆ ಆಧಾರ್ ಕಾರ್ಡ್ ಕೂಡಾ ಇರುವುದಿಲ್ಲ. ಆದರೆ ಮತಕ್ಕಾಗಿ ಜನಪ್ರತಿನಿಧಿಗಳು ಅವರಿಗೆ ಆಧಾರ್ ಕಾರ್ಡ್ ನೀಡುತ್ತಾರೆ ಎಂದು ರಾಜ್ ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, 1999ರಲ್ಲಿ ಶರದ್ ಪವಾರ್ ತಮ್ಮ ಪಕ್ಷವನ್ನು ಸ್ಥಾಪಿಸಿದ ನಂತರ ಮಹಾರಾಷ್ಟ್ರದಲ್ಲಿ ಜಾತಿವಾದಿ ರಾಜಕೀಯ ಹೆಚ್ಚಾಯಿತು. ಪವಾರ್ ಅವರ ಎನ್‌ಸಿಪಿ ಪಕ್ಷ ಯಾವಾಗಲೂ ಜಾತಿಯ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ ಮತ್ತು ಜನರ ನಡುವೆ ಒಡಕು ಮೂಡಿಸಿದೆ. ಜಾತಿವಾದಿ ರಾಜಕಾರಣದಿಂದ ಹೊರಬರದಿದ್ದರೆ, ಹಿಂದೂ ಆಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಶ್ಲಾಘಿಸಿದ ರಾಜ್ ಠಾಕ್ರೆ ಉತ್ತರ ಪ್ರದೇಶ ರಾಜ್ಯವು ಪ್ರಗತಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಅದೇ ಅಭಿವೃದ್ಧಿಯನ್ನು ನಾವು ಬಯಸುತ್ತಿದ್ದೇವೆ. ಉತ್ತರ ಪ್ರದೇಶ ಪ್ರಗತಿಯಾಗುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಐಸಿಸ್ ಸಂಘಟನೆಗೆ ಯುವಕರನ್ನು ಸೆಳೆಯುತ್ತಿದ್ದ ವ್ಯಕ್ತಿ ಹೈದರಾಬಾದ್ನಲ್ಲಿ ಬಂಧನ