ಜೈಪುರ(ರಾಜಸ್ಥಾನ): ಬೇಹುಗಾರಿಕಾ ಪ್ರಕರಣದಲ್ಲಿ ಬಂಧಿತನಾಗಿರುವ, ರಾಜಸ್ಥಾನದ ರೈಲ್ವೆ ಪೋಸ್ಟಲ್ ಸರ್ವೀಸ್ನಲ್ಲಿ ಕೆಲಸ ಮಾಡುತ್ತಿದ್ದ ನೌಕರನನ್ನು ಸೆಪ್ಟೆಂಬರ್ 13ರವರೆಗೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
27 ವರ್ಷದ ಭರತ್ ಬಾವ್ರಿ ಎಂಬಾತನನ್ನು ಮಿಲಿಟರಿ ಗುಪ್ತಚರ ಇಲಾಖೆ ಮತ್ತು ರಾಜಸ್ಥಾನ ಪೊಲೀಸ್ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಬೇಹುಗಾರಿಕೆ ನಡೆಸುತ್ತಿರುವ ಆರೋಪದಲ್ಲಿ ಬಂಧಿಸಲಾಗಿತ್ತು.
ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್‌ನ (ಐಎಸ್‌ಐ) ಮಹಿಳಾ ಏಜೆಂಟ್ ಹನಿಟ್ರ್ಯಾಪ್ ನಡೆಸಿದ್ದು, ಈ ಪ್ರಕರಣದಲ್ಲಿ ಭರತ್ ಬಾವ್ರಿ ಸಿಕ್ಕಿಬಿದ್ದಿದ್ದನು. ಇದೇ ಕಾರಣದಿಂದ ಭಾರತೀಯ ಸೇನೆಯ ಗೌಪ್ಯ ಮಾಹಿತಿ ಮತ್ತು ಕಾರ್ಯತಂತ್ರದ ವಿವಿಧ ಮಾಹಿತಿಯನ್ನು ಪಾಕ್ಗೆ ಸೋರಿಕೆ ಮಾಡುತ್ತಿದ್ದನು ಎಂದು ಪೊಲೀಸ್ ಗುಪ್ತಚರ ವಿಭಾಗದ ಮಹಾನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.
ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನನ್ನು ಸೆಪ್ಟೆಂಬರ್ 13ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ ಎಂದು ಉಮೇಶ್ ಮಿಶ್ರಾ ಅವರು ಸ್ಪಷ್ಟನೆ ನೀಡಿದ್ದಾರೆ.
ಗಡಿಯುದ್ದಕ್ಕೂ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳಿಗೆ ಕೆಲವು ಚಿತ್ರಗಳನ್ನು ರವಾನಿಸಲಾಗುತ್ತಿದೆ ಎಂದು ತಾಂತ್ರಿಕ ಒಳಹರಿವು ಸೂಚಿಸಿದ ನಂತರ ಬಾವ್ರಿ ಕೆಲಕಾಲ ಮಿಲಿಟರಿ ಇಂಟೆಲಿಜೆನ್ಸ್‌ನ ಮೇಲ್ವಿಚಾರಣೆಯಲ್ಲಿದ್ದರು ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದರು.
ಭರತ್ ಬಾವ್ರಿ ಮೇಲೆ ಕೆಲ ಕಾಲ ಮಿಲಿಟರಿ ಗುಪ್ತಚರ ಇಲಾಖೆ ಇಗಾ ವಹಿಸಿತ್ತು. ಕೆಲ ದಿನಗಳ ನಂತರ ತಾಂತ್ರಿಕ ಮಾಹಿತಿಗಳು ಆರೋಪಿಯು ಸೇನಾ ಅಂಚೆ ಕಚೇರಿಯ ಮಾಹಿತಿ ಇರುವ ಎಲ್ಲಾ ಪತ್ರಗಳನ್ನು ತೆರೆದು, ಅವುಗಳ ಮಾಹಿತಿಯನ್ನು ಪಾಕ್ಗೆ ರವಾನಿಸುತ್ತಿದ್ದ ಎಂದು ಗೊತ್ತಾಗಿದ್ದು, ತಕ್ಷಣ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದಿಢೀರ್ ರಾಜಕೀಯ ಬೆಳವಣಿಗೆ: ವೀಕ್ಷಕರಾಗಿ ಜೋಶಿ, ತೋಮರ್ ಗುಜರಾತ್ಗೆ ಭೇಟಿ