ಡೆಹರಾಡೂನ್: ಕಳೆದೊಂದು ವಾರದಿಂದ ಹೊತ್ತಿ ಉರಿಯುತ್ತಿರುವ ಅರಣ್ಯ ರಕ್ಷಣೆಗೆ ಅಗ್ನಿ ಶಾಮಕದಳಗಳು ಸತತವಾಗಿ ಪ್ರಯತ್ನಿಸುತ್ತಿವೆ. ಸತತ ಕಾಳ್ಗಿಚ್ಚಿನಿಂದ ಭಾರಿ ಪ್ರಮಾಣದ ಅರಣ್ಯ ನಾಶವಾಗಿದೆ.
ಈ ನಡುವೆ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದ ನಡುವೆಯೇ ಅಲ್ಲಲ್ಲಿ ಚದುರಿದ ಮಳೆಯಿಂದಾಗಿ ಕಾಳ್ಗಿಚ್ಚಿನ ಪ್ರಭಾವ ಕಡಿಮೆ ಆಗಿದೆ. ಕಳೆದ ರಾತ್ರಿ ಅಲ್ಲಲ್ಲಿ ಸುರಿದ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಹಬ್ಬುತ್ತಿದ್ದ ಬೆಂಕಿಯ ಕೆನ್ನಾಲಿಗೆ ತಗ್ಗುವಂತೆ ಮಾಡಿದೆ. ಇದೇ ವೇಳೆ ಹವಾಮಾನ ಇಲಾಖೆ ಇನ್ನೊಂದೆರೆಡು ದಿನಗಳ ಕಾಲ ಮಳೆ ಹೀಗೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇದರಿಂದ ಉತ್ತರಾಖಂಡ ಸರ್ಕಾರ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಹೆಲಿಕಾಪ್ಟರ್ಗಳು ಬೆಂಕಿ ನಂದಿಸಲು ಅವಿರತವಾಗಿ ಶ್ರಮಿಸುತ್ತಿವೆ. ಕಾಳ್ಗಿಚ್ಚಿನಿಂದ ಉಂಟಾದ ಹೊಗೆ ನಿಯಂತ್ರಣ ಮಾಡಲು 4 ರಿಂದ 5 ಸಾವಿರ ಲೀಟರ್ ನೀರನ್ನು ಕಾಡಿಗೆ ಸುರಿಯಲಾಗಿದೆ. ಕಳೆದ 36 ಗಂಟೆಗಳಿಂದ ಹೊತ್ತಿಕೊಂಡಿರುವ ಬೆಂಕಿಗೆ 105 ಹೆಕ್ಟೇರ್ ಅರಣ್ಯ ಸುಟ್ಟು ಬೂದಿ ಆಗಿದೆ. ಇದಷ್ಟೇ ಅಲ್ಲ ಇಂತಹುದೇ 75 ಹೊಸ ಘಟನೆಗಳು ರಾಜ್ಯದಲ್ಲಿ ನಡೆದಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಯ ರೌದ್ರ ನರ್ತನ ತಡೆಯಲು ಅರಣ್ಯ ಇಲಾಖೆಯ 12 ಸಾವಿರ ಸಿಬ್ಬಂದಿ ಹಗಲು- ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.