ನವದೆಹಲಿ: ಪಿಎಂ ಗತಿ ಶಕ್ತಿ (PM GATI-SHAKTI) ಯೋಜನೆ ಅಡಿ ಮುಂದಿನ 4-5 ವರ್ಷಗಳಲ್ಲಿ 500 ಮಲ್ಟಿಮಾಡಲ್ ಕಾರ್ಗೋ ಟರ್ಮಿನಲ್‌ಗಳನ್ನು ಸ್ಥಾಪಿಸಲು 50,000 ಕೋಟಿ ರೂಪಾಯಿಯನ್ನು ಭಾರತೀಯ ರೈಲ್ವೆ ಹೂಡಿಕೆ ಮಾಡಲಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, " ಪಿಎಂ ಗತಿ-ಶಕ್ತಿ ಯೋಜನೆಯಡಿ ಮುಂದಿನ 4-5 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವ ಬಹು-ಮಾದರಿ ಕಾರ್ಗೋ ಟರ್ಮಿನಲ್‌ಗಳ ಮೂಲಕ ವಿವಿಧ ಸಾರಿಗೆ ವಿಧಾನಗಳನ್ನು ರೈಲ್ವೆ ಸಾರಿಗೆ ಜಾಲದೊಂದಿಗೆ ಸಂಯೋಜಿಸಲಾಗುವುದು. ಇದು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಈ ರೀತಿಯ ಸುಮಾರು 500 ಮಲ್ಟಿಮಾಡಲ್ ಕಾರ್ಗೋ ಟರ್ಮಿನಲ್‌ಗಳನ್ನು ಸ್ಥಾಪಿಸಲಾಗುವುದು ಎಂದರು.
ಇದನ್ನೂ ಓದಿ: PM GatiShakti- ರಾಷ್ಟ್ರೀಯ ಮಾಸ್ಟರ್ ಪ್ಲಾನ್ಗೆ ಪ್ರಧಾನಿ ಮೋದಿ ಚಾಲನೆ
ಟರ್ಮಿನಲ್‌ಗಳ ಸ್ಥಾಪನೆ ಮೂಲಕ ಕಲ್ಲಿದ್ದಲು, ಉಕ್ಕು, ಬಾಕ್ಸೈಟ್, ಅಲ್ಯೂಮಿನಿಯಂ, ಸುಣ್ಣದ ಕಲ್ಲು ಮತ್ತು ಸಿಮೆಂಟ್ ನಂತಹ ಬೃಹತ್ ಸರಕು ಸಾಗಣೆಯ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುವುದು. ಇದರೊಂದಿಗೆ, ಸಣ್ಣ ಪ್ರಮಾಣದ ಸರಕು ಸಾಗಿಸುವ ಪಾರ್ಸೆಲ್ ಸೇವೆಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಸಹ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 100 ಲಕ್ಷ ಕೋಟಿ ರೂ. ವೆಚ್ಚದ ಗತಿ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು.