ರತ್ನಗಿರಿ (ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ 'ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಬಂಧಿಸಲ್ಪಟ್ಟಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಅವರಿಗೆ ಮಹಾಡ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬಿಜೆಪಿ ಆಯೋಜಿಸಿದ್ದ 'ಜನಾಶೀರ್ವಾದ್ ಯಾತ್ರೆ'ಯ ಭಾಗವಾಗಿ ನಿನ್ನೆ ರಾಯಗಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದ ನಾರಾಯಣ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದರು."ಆಗಸ್ಟ್ 15 ರಂದು ಉದ್ಧವ್ ಠಾಕ್ರೆ ತಮ್ಮ ಭಾಷಣದ ಸಮಯದಲ್ಲಿ ಸ್ವಾತಂತ್ರ್ಯ ಸಿಕ್ಕ ವರ್ಷವನ್ನು ಮರೆತಿದ್ದರು. ಮತ್ತೊಬ್ಬರ ಸಹಾಯದ ಮೇಲೆ ವರ್ಷವನ್ನು ಹೇಳಿದ್ದರು. ನಾನು ಸ್ಥಳದಲ್ಲೇನಾದರೂ ಇದ್ದಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ" ಎಂದು ನಾರಾಯಣ್ ರಾಣೆ ಹೇಳಿದ್ದರು.
ನಾರಾಯಣ್ ರಾಣೆ ವಿರುದ್ಧ ನಾಸಿಕ್ ನಗರ ಶಿವಸೇನೆ ಘಟಕದ ಮುಖ್ಯಸ್ಥ ಸೈಬರ್ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದರು. ಈ ದೂರಿನ ಆಧಾರದ ಮೇಲೆ ರಾಣೆ ಮೇಲೆ ಐಪಿಸಿ ಸೆಕ್ಷನ್ 500, 505 (2), 153-ಬಿ (1) (ಸಿ) ಅಡಿಯಲ್ಲಿ FIR ದಾಖಲಾಗಿತ್ತು. ರಾಣೆ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಆಗ ಕೋರ್ಟ್‌ನ ಕಾರ್ಯಕಲಾಪ ಅವಧಿ ಮುಕ್ತಾಯವಾಗಿತ್ತು. ಹೀಗಾಗಿಜನ ಆಶೀರ್ವಾದ ಯಾತ್ರೆ ವೇಳೆ ಮಧ್ಯಾಹ್ನದ ಊಟ ಮಾಡುತ್ತಿದ್ದಾಗಲೇ ರತ್ನಗಿರಿ ಪೊಲೀಸರು ನಾರಾಯಣ್ ರಾಣೆ ಅವರನ್ನು ಅರೆಸ್ಟ್ ಮಾಡಿದ್ದರು.
ಬಳಿಕ ಕೇಂದ್ರ ಸಚಿವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಕೇಂದ್ರ ಸಚಿವರ ರಾಣೆ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಇವರ ಹೇಳಿಕೆ ಖಂಡಿಸಿ ಇಂದು ಶಿವಸೇನೆ ಕಾರ್ಯಕರ್ತರು ರತ್ನಗಿರಿ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಹಾಗೂ ಶಿವಸೇನೆ ಕಾರ್ಯಕರ್ತರ ನಡುವೆ ಗಲಾಟೆ ಕೂಡ ನಡೆದಿತ್ತು.