ಕಥುವಾ: ಶುಕ್ರವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಕಥುವಾದಿಂದ ಭಾರತ್ ಜೋಡೋ ಯಾತ್ರೆ ಪುನರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಳಿಗಾಲದ ಜಾಕೆಟ್ ಧರಿಸಿ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ರಾಹುಲ್ ಅವರು ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದಾಗಿನಿಂದ ಇಡೀ ಪಾದಯಾತ್ರೆಯಲ್ಲಿ ಕೇವಲ ಬಿಳಿ ಟಿ ಶರ್ಟ್ ಧರಿಸಿದ್ದರು. ಇದೇ ಮೊದಲ ಬಾರಿಗೆ ಯಾತ್ರೆಯಲ್ಲಿ ಅವರು ಜಾಕೆಟ್ ಧರಿಸಿದ್ದಾರೆ.
ಪುನಾರಂಭಗೊಂಡ ಯಾತ್ರೆ ಇಂದಿಗೆ 125ನೇ ದಿನಕ್ಕೆ ಕಾಲಿಟ್ಟಿತು. ಶಿವಸೇನಾ (ಉದ್ಧವ್ ಠಾಕ್ರೆ ಬಣದ) ನಾಯಕ ಸಂಜಯ್ ರಾವತ್ ಸ್ಥಳೀಯ ನಾಯಕರೊಂದಿಗೆ ರಾಹುಲ್ ಜೊತೆ ಯಾತ್ರೆಯಲ್ಲಿ ಪಾಲ್ಗೊಂಡರು. ಯಾತ್ರೆ ಗುರುವಾರ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಿದೆ. ಜನವರಿ 26 ರಂದು ಕಣಿವೆಯಲ್ಲಿ ರಾಹುಲ್ ತ್ರಿವರ್ಣ ಧ್ವಜವನ್ನು ಹಾರಿಸುವುದರೊಂದಿಗೆ ಯಾತ್ರೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರ ಪ್ರವೇಶಿಸಿದ ರಾಹುಲ್‌ರನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಲಖನ್‌ಪುರದಲ್ಲಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನನ್ನ ಕುಟುಂಬ ಜಮ್ಮು ಮತ್ತು ಕಾಶ್ಮೀರದಿಂದ ಬಂದಿರುವ ಕಾರಣ ನಾನಿಂದು ನನ್ನ ಮನೆಗೆ ಬಂದಂತಾಗಿದೆ ಎಂದು ಹೇಳಿದರು.
ನಿಮ್ಮ ಸುಖ - ದುಃಖದಲ್ಲಿ ನಾನೂ ಭಾಗಿ: ಇಲ್ಲಿನ ಜನರು ಅನುಭವಿಸುತ್ತಿರುವ ನೋವು ನನಗೆ ಅರ್ಥವಾಗಿದ್ದು, ನಿಮ್ಮ ದುಃಖದಲ್ಲಿ ನಾನು ಭಾಗಿಯಾಗಲು ಬಂದಿದ್ದೇನೆ ಎಂದು ರಾಹುಲ್ ಹೇಳಿದರು. ಭಾರತ್ ಜೋಡೋ ಯಾತ್ರೆಯು ಪ್ರೀತಿ ಮತ್ತು ಸಹಾನುಭೂತಿಯನ್ನು ಹರಡುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಇದೇ ಸಮಯದಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಶಂಕರಾಚಾರ್ಯ ಮತ್ತು ರಾಹುಲ್ ಗಾಂಧಿಯ ನಡುವೆ ಸಾಮ್ಯತೆಯಿದೆ ಎಂದು ಬಣ್ಣಿಸಿದರು.
ಅಂದು ಶಂಕರಾಚಾರ್ಯ ಇಂದು ರಾಹುಲ್: ಹಲವು ವರ್ಷಗಳ ಹಿಂದೆ, ಶಂಕರಾಚಾರ್ಯರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಕೈಗೊಂಡಿದ್ದರು ಮತ್ತು ಇಂದು ನೀವು ಅದನ್ನು ಮಾಡುತ್ತಿದ್ದೀರಿ ಎಂದು ಸಂಸದ ಫಾರೂಕ್ ಅಬ್ದುಲ್ಲಾ ಹೇಳಿದರು. ಜನರು ಧರ್ಮದ ಆಧಾರದ ಮೇಲೆ ಒಡೆದು ಹೋಗಿರುವುದರಿಂದ ಇಂದಿನ ಭಾರತ ರಾಮನ ಭಾರತ ಅಥವಾ ಗಾಂಧಿಯ ಹಿಂದೂಸ್ತಾನವಾಗಿ ಉಳಿದಿಲ್ಲ. ನಾವು ಒಟ್ಟಿಗೆ ಇದ್ದರೆ, ಈ ದ್ವೇಷವನ್ನು ಜಯಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಜಾಕೆಟ್ ಅಲ್ಲ ರೇನ್ಕೋಟ್: ರಾಹುಲ್ ಗಾಂಧಿ ಧರಿಸಿದ್ದು ರೇನ್ಕೋಟ್, ಅದು ಜಾಕೆಟ್ ಅಲ್ಲ ಎಂದು ಕಾಂಗ್ರೆಸ್ ಹೇಳಿದೆ. ಮಳೆ ಹೋದ ನಂತರ ರೇನ್ಕೋಟ್ ಕೂಡ ಅವರು ತೆಗೆದಿದ್ದಾರೆ ಎಂದು ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಜನವರಿ 20 ರಂದು ಆರಂಭವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಜಮ್ಮು ಮತ್ತು ಕಾಶ್ಮೀರ ಘಟ್ಟಕ್ಕೆ ಅಗತ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದರು. ಯಾತ್ರೆಗೆ ಭದ್ರತಾ ದೃಷ್ಟಿಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸಿನ್ಹಾ ಸುದ್ದಿಗಾರರಿಗೆ ತಿಳಿಸಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಯಾತ್ರೆ, ಸೆಪ್ಟೆಂಬರ್ 7 ರಂದು ಆರಂಭವಾಗಿತ್ತು. ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ದೆಹಲಿ, ಪಂಜಾಬ್ ರಾಜ್ಯಗಳನ್ನು ದಾಟಿದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ: ಜನವರಿ 30ಕ್ಕೆ ಸಮಾರೋಪ