ನವದೆಹಲಿ: ಭಾರತದ ಸಂಸತ್ತಿನಲ್ಲಿ ಪ್ರತಿಪಕ್ಷ ಸದಸ್ಯರ ಮೈಕ್ರೊಫೋನ್ಗಳನ್ನು ಪದೇ ಪದೆ ಆಫ್ ಮಾಡಲಾಗುತ್ತದೆ ಎಂದು ಲಂಡನ್ನಲ್ಲಿ ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮನವಿ ಮಾಡಿದ್ದಾರೆ. ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ತುಕ್ಡೆ ತುಕ್ಡೆ ಗ್ಯಾಂಗ್‌ನಂತೆ ಮಾತನಾಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
ಅವರು ಸಂಸತ್ತಿನಲ್ಲಿ ಸಾಕಷ್ಟು ಮಾತನಾಡಿದ್ದಾರೆ. ಆದರೂ ತಮ್ಮ ಮೈಕ್ ಸ್ವಿಚ್ಡ್ ಆಫ್ ಮಾಡಲಾಗಿರುತ್ತದೆ, ಮಾತನಾಡಲು ಬಿಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಮೇಲಿನ ದಾಳಿ ಮತ್ತು ಲೋಕಸಭೆ ಹಾಗೂ ದೇಶಕ್ಕೆ ಮಾಡಿದ ಅಪಮಾನ ಎಂದು ಸಚಿವ ಗಿರಿರಾಜ್ ಸಿಂಗ್ ಲೋಕಸಭೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತ ಹೇಳಿದರು. ಪ್ರತಿಪಕ್ಷ ಸದಸ್ಯರ ಮೈಕ್ಗಳನ್ನು ಆಗಾಗ ಆಫ್ ಮಾಡಲಾಗುತ್ತದೆ ಎಂದು ರಾಹುಲ್ ಗಾಂಧಿ ಬ್ರಿಟನ್ ಸಂಸದರ ಎದುರು ಹೇಳಿದ್ದರು.
ನಮ್ಮ ಮೈಕ್‌ಗಳು ಸರಿಯಾಗಿಲ್ಲ ಎಂದಲ್ಲ. ಅವು ಕಾರ್ಯನಿರ್ವಹಿಸುತ್ತಿವೆ, ಆದರೆ ನೀವು ಅವುಗಳನ್ನು ಆನ್ ಮಾಡಲು ಸಾಧ್ಯವಿಲ್ಲ. ನಾನು ಮಾತನಾಡುತ್ತಿರುವಾಗ ಇಂಥ ಅನುಭವ ನನಗೆ ಹಲವಾರು ಬಾರಿ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಹೇಳಿದರು. ರಾಹುಲ್ ಗಾಂಧಿಯ ಈ ಹೇಳಿಕೆ ಹಸಿ ಸುಳ್ಳು ಎಂದು ಗಿರಿರಾಜ್ ಸಿಂಗ್ ಹೇಳಿದರು. ಲೋಕಸಭಾ ಸ್ಪೀಕರ್ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಈ ಹೇಳಿಕೆಗಳಿಂದ ದೇಶಕ್ಕೆ ಅವಮಾನವಾಗಿದೆ. ಭಾರತಕ್ಕೆ ವಿಶ್ವದಿಂದ ಗೌರವ ಸಿಗುತ್ತಿದೆ. ಆದರೆ, ಅವರು ವಿದೇಶಕ್ಕೆ ಹೋಗಿ ತುಕ್ಡೆ ತುಕ್ಡೆ ಗ್ಯಾಂಗ್‌ನಂತೆ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಸಿಂಗ್ ಹೇಳಿದರು. ಕಾನೂನು ಸಚಿವ ಕಿರಣ್ ರಿಜಿಜು ಕೂಡ ಟ್ವೀಟ್‌ನಲ್ಲಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಸಂಸದರೊಬ್ಬರು ಲಂಡನ್‌ಗೆ ಹೋಗಿ ಭಾರತದ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸುವಂತೆ ವಿದೇಶಗಳಿಗೆ ಮನವಿ ಮಾಡಿರುವುದು ಅತ್ಯಂತ ದುರದೃಷ್ಟಕರ. ನಾವೆಲ್ಲರೂ ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ನಮ್ಮ ಪ್ರಜಾಪ್ರಭುತ್ವ ಪರಂಪರೆಯನ್ನು ಗೌರವಿಸುತ್ತೇವೆ. ಭಾರತೀಯರು ಎಂದಿಗೂ ವಿದೇಶಿ ಶಕ್ತಿಗಳಿಗೆ ಭಾರತವನ್ನು ಆಳಲು ಬಿಡುವುದಿಲ್ಲ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.
ಪ್ರತಿರೋಧದ ಧ್ವನಿ ಹತ್ತಿಕ್ಕಲಾಗಿದೆ ಎಂದಿದ್ದ ರಾಹುಲ್: ಒಂದು ವಾರದವರೆಗೆ ಯುನೈಟೆಡ್ ಕಿಂಗ್‌ಡಂ ಪ್ರವಾಸ ಮಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಳೆದ ಸೋಮವಾರ ಬ್ರಿಟನ್ ಸಂಸತ್ತಿನಲ್ಲಿ ಭಾಷಣ ಮಾಡಿದ್ದರು. ಭಾರತದಲ್ಲಿ ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕಲಾಗಿದೆ, ನಮ್ಮ ಸಂಸತ್ತಿನಲ್ಲಿ ಮೈಕ್‌ಗಳು ಮೌನವಾಗಿವೆ ಎಂದು ತನ್ನದೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಹುಲ್ ವಿದೇಶಿಯರ ಮುಂದೆ ಕಟುವಾಗಿ ಟೀಕಿಸಿದ್ದರು. ಹೌಸ್ ಆಫ್ ಕಾಮನ್ಸ್ ಕಾಂಪ್ಲೆಕ್ಸ್‌ನ ಗ್ರ್ಯಾಂಡ್ ಕಮಿಟಿ ಕೊಠಡಿಯಲ್ಲಿ ಹಿರಿಯ ಭಾರತೀಯ ಮೂಲದ, ವಿರೋಧ ಪಕ್ಷದ ಲೇಬರ್ ಪಕ್ಷದ ಸಂಸದ ವೀರೇಂದ್ರ ಶರ್ಮಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಹುಲ್ ತಮ್ಮ ಭಾರತ್ ಜೋಡೋ ಯಾತ್ರೆಯ ಅನುಭವಗಳನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ : ದೆಹಲಿ ಶಾಸಕ, ಸಚಿವರ ಸಂಬಳ ಶೇ.66 ರಷ್ಟು ಹೆಚ್ಚಳ.. ಪ್ರಸ್ತಾವನೆಗೆ ರಾಷ್ಟ್ರಪತಿಗಳ ಅಂಗೀಕಾರ