ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಕ್ಷಣದಿಂದಲೇ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕೆಂದು ದೆಹಲಿ ಕಾಂಗ್ರೆಸ್ ನಿರ್ಣಯವನ್ನು ಅಂಗೀಕಾರ ಮಾಡಿದ್ದು, ರಾಹುಲ್ ರಿಟರ್ನ್ಸ್ ಎಂಬ ಅಭಿಯಾನವನ್ನು ಆರಂಭಿಸಿದೆ.
ಜೂನ್ನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯನ್ನು ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿ ತಕ್ಷಣದಿಂದಲೇ ಆಯ್ಕೆ ಮಾಡಬೇಕೆಂಬ ನಿರ್ಣಯವನ್ನು ಅಂಗೀಕರಿಸಿದೆ.
ಇದಕ್ಕಾಗಿ ಪಕ್ಷದ ಕಚೇರಿಯಲ್ಲಿ ಹಿರಿಯ ನಾಯಕರ ಸಭೆ ನಡೆದಿದ್ದು, ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ ಪ್ರಸ್ತಾಪಿಸಿದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ವೇಳೆ ಎಐಸಿಸಿ ಉಸ್ತುವಾರಿ ಶಕ್ತಿ ಸಿಂಗ್ ಗೋಹಿಲ್ ಹಾಜರಿದ್ದರು.
ಇದನ್ನೂ ಓದಿ: ದೇಶದ ಸ್ವಚ್ಛ ನಗರಿ ಇಂದೋರ್ ಹೇಗಾಯ್ತು ಗೊತ್ತಾ? ಯಾವ ರಾಜ್ಯವೂ ಇಷ್ಟು ಸ್ವಚ್ಛವಾಗಬಾರದು!!
ಕೇಂದ್ರದಲ್ಲಿನ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಏಕಕಾಲದಲ್ಲಿ ದೇಶದ ಪ್ರಜಾಪ್ರಭುತ್ವ, ಆರ್ಥಿಕತೆ, ಸಾಮಾಜಿಕ ಮತ್ತು ಧಾರ್ಮಿಕತೆಯ ಮೇಲೆ ದಾಳಿ ಮಾಡುತ್ತಿದೆ. ಒಂದೊಂದಾಗಿ ಸಾರ್ವಜನಿಕ ಸಂಸ್ಥೆಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತಿವೆ ಎಂದು ಈ ವೇಳೆ ದೆಹಲಿ ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಕಾಂಗ್ರೆಸ್ನಲ್ಲಿ ಅಧ್ಯಕ್ಷರ ಚುನಾವಣೆಯನ್ನು ನಡೆಸಬೇಕೆಂದು ಮೇ 2020ರಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಈಗ ದೆಹಲಿ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿಸಬೇಕೆಂಬ ನಿರ್ಣಯ ಅಂಗೀಕಾರ ಮಾಡಿದ್ದು, ಇನ್ನೂ ಕೆಲವು ರಾಜ್ಯಗಳು ಇದೇ ಮಾರ್ಗವನ್ನು ಅನುಸರಿಸುವ ಸಾಧ್ಯತೆಯಿದೆ.