ನವದೆಹಲಿ: ಸೋನಿಯಾ ಗಾಂಧಿಗೆ ಜಿ-23 ಮುಖಂಡರು ಪತ್ರ ಬರೆದ ನಂತರ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರಿಂದ ತಾವು ಅಪಮಾನ ಎದುರಿಸಬೇಕಾಯಿತು ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ತಮ್ಮ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಆಜಾದ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಕಾಂಗ್ರೆಸ್ನ ಇಂದಿನ ದುರ್ಬಲ ಸ್ಥಿತಿಗೆ ಕಾರಣಗಳು ಮತ್ತು ಅದಕ್ಕಿರುವ ಪರಿಹಾರಗಳ ಬಗ್ಗೆ ಪಕ್ಷದ 23 ಪ್ರಮುಖ ನಾಯಕರು ಪತ್ರ ಬರೆದಿದ್ದೇ ದೊಡ್ಡ ಅಪರಾಧವಾಗಿತ್ತು. ಅಂದು ನೀಡಲಾದ ಸಲಹೆಗಳನ್ನು ರಚನಾತ್ಮಕ ಮತ್ತು ವಿಶಾಲ ದೃಷ್ಟಿಕೋನದಿಂದ ಸ್ವೀಕರಿಸುವ ಬದಲು, ಸಿಡಬ್ಲ್ಯೂಸಿ ವಿಶೇಷ ಸಭೆಯಲ್ಲಿ ತಮ್ಮನ್ನು ನಿಂದನೆ ಮತ್ತು ಅಪಮಾನಕ್ಕೊಳಪಡಿಸಲಾಯಿತು ಎಂದು ಆಜಾದ್ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಆಗಸ್ಟ್ 2020ರಲ್ಲಿ ಹಿಂದಿನ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ, ನಾನು ಮತ್ತು ನನ್ನ ಜೊತೆಗಿದ್ದ 22 ಹಿರಿಯ ಮುಖಂಡರು ಪಕ್ಷದ ಹೀನಾಯ ಸ್ಥಿತಿಯ ಬಗ್ಗೆ ತಮಗೆ ಪತ್ರದ ಮೂಲಕ ತಿಳಿಸಿದಾಗ, ಪಕ್ಷದೊಳಗಿನ ದುಷ್ಟರ ಕೂಟವು ತನ್ನ ಹಿಂಬಾಲಕರನ್ನು ಬಿಟ್ಟು ನಮ್ಮ ಮೇಲೆ ಎಷ್ಟು ಸಾಧ್ಯವೋ ಅಷ್ಟು ಒರಟಾಗಿ ಆಕ್ರಮಣ ನಡೆಸಿ, ನಿಂದಿಸಿ ಅಪಮಾನ ಮಾಡಿತು ಎಂದು ಆಜಾದ್ ತಿಳಿಸಿದ್ದಾರೆ.
ಇಂದು ಎಐಸಿಸಿಯನ್ನು ನಡೆಸುತ್ತಿರುವ ದುಷ್ಟರಕೂಟದ ಅಣತಿಯ ಮೇರೆಗೆ ಅಂದು ಜಮ್ಮುವಿನಲ್ಲಿ ನನ್ನ ಅಣಕು ಶವಯಾತ್ರೆ ನಡೆಸಲಾಯಿತು ಮತ್ತು ಅಂಥ ಕೃತ್ಯವೆಸಗಿದವರನ್ನು ಎಐಸಿಸಿಯ ಕಾರ್ಯಾಧ್ಯಕ್ಷರು ಮತ್ತು ಸ್ವತಃ ರಾಹುಲ್ ಗಾಂಧಿ ದೆಹಲಿಯಲ್ಲಿ ಸನ್ಮಾನಿಸಿದ್ದರು ಎಂದು ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.
ಅದೇ ದುಷ್ಟರ ಕೂಟವು ನಿಮ್ಮ ಹಾಗೂ ನಿಮ್ಮ ಸಂಬಂಧಿಕರು ಎಸಗಿರುವ ತಪ್ಪುಗಳಿಗಾಗಿ ನ್ಯಾಯಾಲಯದಲ್ಲಿ ನಿಮಗಾಗಿ ಹೋರಾಡುತ್ತಿರುವ ಮಾಜಿ ಸಚಿವ ಹಾಗೂ ನಮ್ಮ ಸಹೋದ್ಯೋಗಿ ಕಪಿಲ್ ಸಿಬಲ್ ಅವರ ಮೇಲೆ ದೈಹಿಕವಾಗಿ ದಾಳಿ ಮಾಡಲು ಅವರ ನಿವಾಸಕ್ಕೆ ತನ್ನ ಗೂಂಡಾಗಳನ್ನು ಕಳುಹಿಸಿತ್ತು ಎಂದು ಆಜಾದ್ ಪತ್ರದಲ್ಲಿ ಬರೆದಿದ್ದಾರೆ.
2014 ರಿಂದ ಮತ್ತು ನಂತರ ರಾಹುಲ್ ಗಾಂಧಿ ನಾಯಕತ್ವದಲ್ಲಿ, ಕಾಂಗ್ರೆಸ್ ಪಕ್ಷವು ಎರಡು ಲೋಕಸಭಾ ಚುನಾವಣೆಗಳಲ್ಲಿ ಅವಮಾನಕರ ರೀತಿಯಲ್ಲಿ ಸೋತಿದೆ. 2014-2022 ರ ನಡುವೆ ನಡೆದ 49 ವಿಧಾನಸಭಾ ಚುನಾವಣೆಗಳಲ್ಲಿ 39 ರಲ್ಲಿ ಸೋತಿದೆ. ಪಕ್ಷವು ಕೇವಲ ನಾಲ್ಕು ರಾಜ್ಯಗಳ ಚುನಾವಣೆಗಳನ್ನು ಗೆದ್ದಿದೆ ಮತ್ತು ಆರು ಸಂದರ್ಭಗಳಲ್ಲಿ ಸಮ್ಮಿಶ್ರ ಪರಿಸ್ಥಿತಿಗೆ ಬರಲು ಸಾಧ್ಯವಾಯಿತು. ದುರದೃಷ್ಟವಶಾತ್ ಇಂದು ಕಾಂಗ್ರೆಸ್ ಕೇವಲ ಎರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಮತ್ತು ಇತರ ಎರಡು ರಾಜ್ಯಗಳಲ್ಲಿ ಅತ್ಯಂತ ಕನಿಷ್ಠ ಸಮ್ಮಿಶ್ರ ಪಾಲುದಾರನಾಗಿದೆ ಎಂದು ಆಜಾದ್ ತಿಳಿಸಿದ್ದಾರೆ.
ಯುಪಿಎ ಸರ್ಕಾರದ ಸಾಂಸ್ಥಿಕ ಸಮಗ್ರತೆಯನ್ನು ಹಾಳು ಮಾಡಿದ 'ರಿಮೋಟ್ ಕಂಟ್ರೋಲ್ ಮಾಡೆಲ್' ಈಗ ಕಾಂಗ್ರೆಸ್ ಪಕ್ಷವನ್ನೂ ಆವರಿಸಿಕೊಂಡಿದೆ. ನೀವು ಕೇವಲ ನಾಮ್ ಕಾ ವಾಸ್ತೆ ಮುಖ್ಯಸ್ಥರಾಗಿದ್ದು, ಎಲ್ಲ ಪ್ರಮುಖ ನಿರ್ಧಾರಗಳನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲ ಪ್ರಮುಖ ನಿರ್ಧಾರಗಳನ್ನು ರಾಹುಲ್ ಅವರ ಸೆಕ್ಯೂರಿಟಿ ಗಾರ್ಡ್ಗಳು ಮತ್ತು ಪಿಎಗಳು ತೆಗೆದುಕೊಳ್ಳುತ್ತಿರುವುದು ಅತ್ಯಂತ ಶೋಚನೀಯವಾಗಿದೆ ಎಂದು ಗುಲಾಂ ನಬಿ ಆಜಾದ್ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.