ಜಮ್ಮು (ಜಮ್ಮು ಮತ್ತು ಕಾಶ್ಮೀರ) : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಜಮ್ಮು ಭೇಟಿ ವೇಳೆ ಅವರು ಕಾತ್ರಾದಿಂದ ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಲಿದ್ದಾರೆ ಎಂದು ಪಕ್ಷದ ಜಮ್ಮು ಮತ್ತು ಕಾಶ್ಮೀರ ಘಟಕದ ಕಾಂಗ್ರೆಸ್ ಅಧ್ಯಕ್ಷ ಗುಲಾಂ ಅಹ್ಮದ್ ಮೀರ್ ಹೇಳಿದರು.
ರಾಹುಲ್ ಗಾಂಧಿಗೆ ವೈಷ್ಣೋದೇವಿ ಮೇಲೆ ವಿಶೇಷವಾದ ನಂಬಿಕೆಯಿದೆ. ಅವರು ಹಲವು ವರ್ಷಗಳಿಂದ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಬೇಕೆಂದುಕೊಂಡಿದ್ದರು ಎಂದು ಮೀರ್ ತಿಳಿಸಿದ್ದಾರೆ.
ನಾವು ಕಳೆದ ಮೂರು ವರ್ಷಗಳಿಂದ ರಾಹುಲ್ ಗಾಂಧಿಯವರನ್ನು ಜಮ್ಮುವಿಗೆ ಬರುವಂತೆ ಕೇಳಿದ್ದೆವು. ಆ ಸಮಯದಲ್ಲಿ ಅವರು ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗದಂತಹ ರಾಜಕೀಯ ಪರಿಸ್ಥಿತಿಯಿತ್ತು. ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಅವರು ಕಳೆದ ತಿಂಗಳು ಶ್ರೀನಗರಕ್ಕೆ ಭೇಟಿ ನೀಡಿದ್ದರು ಎಂದರು. ಇಂದು ಅವರು ಜಮ್ಮುವಿಗೆ ಭೇಟಿ ನೀಡಿದ್ದು, ನಾಳೆ ಅವರು ಕಾಲ್ನಡಿಗೆಯಲ್ಲಿ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳಲಿದ್ದಾರೆ ಎಂದರು.
ದೇಗುಲಕ್ಕೆ ತೆರಳಲು ಅನೇಕ ನಾಯಕರು ಹೆಲಿಕಾಪ್ಟರ್ ಅಥವಾ ಕುದುರೆಗಳನ್ನು ಬಳಸುತ್ತಾರೆ. ಆದರೆ, ರಾಹುಲ್ ಗಾಂಧಿ ಮಾತ್ರ ಕತ್ರಾದಿಂದ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಲಿದ್ದಾರೆ. ಅದಕ್ಕಾಗಿಯೇ ಅಂದು ನಾವು ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು ನಿಗದಿಪಡಿಸಿಲ್ಲ ಎಂದು ಮಾಹಿತಿ ನೀಡಿದರು.
ಜಮ್ಮುವಿನಿಂದ ಕತ್ರಾಗೆ ಕಾರಿನಲ್ಲಿ ತೆರಳಲಿರುವ ಅವರು, ಅಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಳಿಕ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಅವರು ಜಮ್ಮು ಭೇಟಿಯ ಬಳಿಯ ಬಳಿಕ ಲಡಾಖ್ಗೆ ಭೇಟಿ ನೀಡಲಿದ್ದು, ಸ್ಥಳೀಯರೊಂದಿಗೆ ಚರ್ಚಿಸಿ ಪರಿಸ್ಥಿತಿ ಬಗ್ಗೆ ಅವಲೋಕಿಸಲಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಯಾರೂ ರೈತರಲ್ಲ.. ಬಿಜೆಪಿ ನಾಯಕ ವಿವಾದ
ಜಮ್ಮುಕಾಶ್ಮೀರದಲ್ಲಿ 370 ನೇ ವಿಧಿ ರದ್ಧತಿಯ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಎರಡನೇ ಭೇಟಿ ಇದಾಗಿದೆ.