ಪಾಟ್ನಾ (ಬಿಹಾರ): ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಅವರಿಗೆ ಜಾಮೀನಿನ ಮೇಲೆ ಉಳಿಯಲು ಪಾಟ್ನಾ ಎಂಪಿ-ಎಂಎಲ್‌ಎ ನ್ಯಾಯಾಲಯ ಬುಧವಾರ ಅವಕಾಶ ನೀಡಿದೆ. ಆದರೆ, ಏ.25 ರಂದು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ, ಜಾಮೀನು ರದ್ದುಗೊಳ್ಳುವ ಸಾಧ್ಯತೆ ಗೋಚರಿಸಿದೆ. ಮೋದಿ ಉಪನಾಮದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪಾಟ್ನಾದಲ್ಲಿ ಸುಶೀಲ್ ಮೋದಿ ದಾಖಲಿಸಿದ ಪ್ರಕರಣ ಇದಾಗಿದೆ.
ವಿಚಾರಣೆಗೂ ಮುನ್ನ ರಾಹುಲ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಕೋರ್ಟ್‌ಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿದ್ದರು. ಸುಶೀಲ್ ಮೋದಿ ಪರ ವಕೀಲರು ವಾದಿಸಿ, ರಾಹುಲ್ ಗಾಂಧಿ ಅವರ ಜಾಮೀನು ಬಾಂಡ್ ರದ್ದುಗೊಳಿಸಬೇಕು ಎಂದು ಮನವಿ ಸಲ್ಲಿಸಿದ್ದರು. ರಾಹುಲ್ ಪರ ವಕೀಲರ ಅರ್ಜಿ ತಿರಸ್ಕರಿಸಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏ.25ರಂದು ನಡೆಸಲಿದೆ. ಅಂದು ಹಾಜರಾಗದಿದ್ದರೆ, ಜಾಮೀನು ರದ್ದುಗೊಳಿಸುವ ಸಾಧ್ಯತೆ ಇದೆ.
ರಾಹುಲ್ ಪರ ವಕೀಲ ಅಂಶುಲ್ ಕುಮಾರ್ ಮಾತನಾಡಿ, ಏಪ್ರಿಲ್ 25ರಂದು ಹೇಳಿಕೆ ದಾಖಲಿಸಿಕೊಳ್ಳಲಾಗುವುದು. ಅಂದು ರಾಹುಲ್ ಗಾಂಧಿ ಪಾಟ್ನಾ ಕೋರ್ಟ್‌ಗೆ ಬರಬೇಕಾಗುತ್ತದೆ ಎಂದರು.
ಪ್ರಕರಣದ ವಿವರ: ಈ ಪ್ರಕರಣವನ್ನು 2019ರಲ್ಲಿ ಸುಶೀಲ್ ಕುಮಾರ್ ಮೋದಿ ದಾಖಲಿಸಿದ್ದರು. ಮೋದಿ ಹೆಸರಿನವರೆಲ್ಲರೂ ಕಳ್ಳರು ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮೋದಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಬಾಂಬ್ ಬೆದರಿಕೆ ಕರೆ: ಪಾಟ್ನಾ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್