ತಿರುವನಂತಪುರಂ (ಕೇರಳ): ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಕಣ ರಂಗೇರಿದೆ. ಈ ನಡುವೆ ಶಶಿ ತರೂರ್ ಅವರು ಉಮೇದುವಾರಿಕೆ ಹಿಂಪಡೆಯುವಂತೆ ಪಕ್ಷದ ಕೆಲವು ಹಿರಿಯ ನಾಯಕರು ರಾಹುಲ್ ಗಾಂಧಿಯವರನ್ನು ಕೇಳಿದ್ದಾರೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಶಶಿ ತರೂರ್ ಹೇಳಿಕೆ ಕುತೂಹಲ ಮೂಡಿಸಿದೆ.
ಕೇರಳದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧಾಕರನ್ ಅವರು, ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಬೆಂಬಲ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶಶಿ ತರೂರು ಉಮೇದುವಾರಿಕೆಯಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳಿಗೆ ಪುಷ್ಟಿ ನೀಡಿದಂತಾಗಿದೆ.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ರಾಹುಲ್ ಕೇಳುವುದಿಲ್ಲ ಎಂದರು. ಏಕೆಂದರೆ ಸ್ಪರ್ಧೆಯಿಂದ ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ಲಾಭವಾಗುತ್ತದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕು ಎಂದು ಕಳೆದ 10 ವರ್ಷಗಳಿಂದ ಹೇಳುತ್ತಲೇ ಬಂದಿದ್ದನ್ನು ಅವರು ಇದೇ ವೇಳೆ ನೆನಪಿಸಿದರು.
ರಾಹುಲ್ ಹಾಗೆ ಕೇಳುವುದಿಲ್ಲ: ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಶಶಿ ತರೂರ್ಗೆ ಹೇಳುವಂತೆ ಕೆಲವು ವ್ಯಕ್ತಿಗಳು ರಾಹುಲ್ ಕೇಳಿದ್ದಾರೆಂದು ಹೇಳಿದರು. ಅವರು ಹಾಗೆ ಮಾಡುವುದಿಲ್ಲ ಎಂದು ನಾನು ಹೇಳುತ್ತೇನೆ. ನಾನು ಹಿಂದೆ ಸರಿಯಬಾರದು ಮತ್ತು ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಅವರು ಬಯಸುತ್ತಾರೆ ಎಂದು ತಿರುವನಂಪುರ ಸಂಸದ ಶಶಿ ತರೂರ್ ಹೇಳಿದ್ದಾರೆ.
ಇದೇ ವೇಳೆ, ದೊಡ್ಡ ನಾಯಕರು ಬೆಂಬಲ ನೀಡುತ್ತಾರೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ಈಗ ಅದನ್ನು ನಿರೀಕ್ಷಿಸುವುದೂ ಇಲ್ಲ. ಆದರೆ ಅದೇ ಸಮಯದಲ್ಲಿ ತನಗೆ ಎಲ್ಲರ ಬೆಂಬಲ ಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.
ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ: ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ , ಇಲ್ಲಿಯವರೆಗೆ ತಮ್ಮನ್ನು ಬೆಂಬಲಿಸಿದವರಿಗೆ ದ್ರೋಹ ಮಾಡಲು ನಾನು ಬಯಸುವುದಿಲ್ಲ ಎಂದು ತರೂರ್ ಇದೇ ವೇಳೆ ಸ್ಪಷ್ಟಪಡಿಸಿದರು. ನಾನು ಪಕ್ಷದ ದೊಡ್ಡ ನಾಯಕರಿಂದ ಯಾವುದೇ ಬೆಂಬಲವನ್ನು ನಿರೀಕ್ಷಿಸಿರಲಿಲ್ಲ ಮತ್ತು ನಾನು ಈಗ ಅದನ್ನು ನಿರೀಕ್ಷಿಸುತ್ತಿಲ್ಲ. ವಾಸ್ತವವಾಗಿ, ನಾನು ನಾಗ್ಪುರ, ವಾರ್ಧಾ ಮತ್ತು ನಂತರ ಹೈದರಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ್ದೇನೆ. ಅವರು ನನ್ನನ್ನು ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ ಹೀಗಾಗಿ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ನಂಬಿದರವ ವಿಶ್ವಾಸ ಕಳೆದುಕೊಳ್ಳುವುದಿಲ್ಲ: ನಾನು ಹಿಂದೆ ಸರಿಯುವುದಿಲ್ಲ ಎಂದು ಭರವಸೆ ನೀಡಿದ್ದೇನೆ. ಇಲ್ಲಿಯವರೆಗೆ ನನಗೆ ಬೆಂಬಲ ನೀಡಿದವರಿಗೆ ನಾನು ದ್ರೋಹ ಮಾಡುವುದಿಲ್ಲ. ನನ್ನ ಮೇಲಿನ ಅವರ ವಿಶ್ವಾಸವೇ ನನಗೆ ಮುಂದುವರಿಯಲು ಶಕ್ತಿ ನೀಡುತ್ತದೆ ಎಂದು ಅವರು ಹೇಳಿದರು. ತಮ್ಮ ಬೆಂಬಲಿಗರಲ್ಲಿ ಹೆಚ್ಚಿನವರು ಪಕ್ಷದ ಯುವ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಎಂದು ತರೂರ್ ಹೇಳಿದರು.
ಏನೇ ಆದರೂ ಗುಪ್ತ ಮತದಾನವಲ್ಲವೇ? : ಸುಧಾಕರನ್ ಅವರು ಖರ್ಗೆ ಅವರನ್ನು ಸಾರ್ವಜನಿಕವಾಗಿ ಬೆಂಬಲಿಸುವುದು ನಿಮ್ಮನ್ನು ನಿರುತ್ಸಾಹಗೊಳಿಸುವುದಕ್ಕಾಗಿಯೇ ಎಂಬ ಪ್ರಶ್ನೆಗೆ ತರೂರ್, ಬಹುಶಃ ಇರಬಹುದು., ಆದರೆ ನಾನು ಅದನ್ನು ಹೇಳುತ್ತಿಲ್ಲ. ಜನರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಅರ್ಥೈಸುವ ಅಗತ್ಯವಿಲ್ಲ. ನಾನು ಒಂದು ವಿಷಯವನ್ನು ಹೇಳುತ್ತೇನೆ. ಒಬ್ಬರು ರಹಸ್ಯವಾಗಿ ಅಥವಾ ಸಾರ್ವಜನಿಕವಾಗಿ ಏನೇ ಹೇಳಿದರೂ ಮತದಾನವು ರಹಸ್ಯವಾಗಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಅಕ್ಟೋಬರ್ 17 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ ಮತ್ತು ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. 9,000ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳು ಮತದಾನದಲ್ಲಿ ಮತ ಚಲಾಯಿಸಲಿದ್ದಾರೆ.
ಇದನ್ನು ಓದಿ: ಪ್ರಧಾನಿ ಮೋದಿ ಭೇಟಿ: ವರದಿಗಾರರ ನಡತೆ ಪ್ರಮಾಣಪತ್ರ ಕೇಳಿದ ಪೊಲೀಸರು.. ಟೀಕೆ ನಂತರ ಆದೇಶ ವಾಪಸ್