ನವದೆಹಲಿ: ಕರ್ನಾಟಕದ ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪರ - ವಿರೋಧಗಳು ಚರ್ಚೆಯಾಗುತ್ತಿವೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಈ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕುರಿತು ಟ್ವೀಟ್ ಮಾಡಿದ್ದು, ಹಿಜಾಬ್ ವಿವಾದದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಹಿಜಾಬ್ ವಿಚಾರವನ್ನು ಅವರ ಶಿಕ್ಷಣಕ್ಕೆ ಅಡ್ಡಿಯಾಗಲು ಬಿಡುವ ಮೂಲಕ ಅವರ ಭವಿಷ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಸರಸ್ವತಿ ಎಲ್ಲರಿಗೂ ಜ್ಞಾನವನ್ನು ನೀಡುತ್ತಾಳೆ. ಯಾರಲ್ಲೂ ಆಕೆ ಭೇದ-ಭಾವ ಮಾಡುವುದಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಮಾತ್ರವಲ್ಲದೇ, ಶುಕ್ರವಾರ ಪಾರ್ಲಿಮೆಂಟ್ನಲ್ಲೂ ಹಿಜಾಬ್ ಬಗ್ಗೆ ಚರ್ಚೆಯಾಗಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯೊಳಗೆ ತೆರಳದಂತೆ ತಡೆದ ಆರೋಪ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನಡೆಯನ್ನು ಕೆಲವು ಸಂಸದರು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಎಂಕೆಯ ಡಾ.ಎಸ್.ಸೆಂಥಿಲ್‌ಕುಮಾರ್, ಕಾಂಗ್ರೆಸ್‌ನ ಶಶಿ ತರೂರ್, ಎಐಎಂಐಎಂನ ಇಮ್ತಿಯಾಜ್ ಜಲೀಲ್ ಮುಂತಾದವರು ಕರ್ನಾಟಕ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಸರ್ಕಾರಿ ಕಾಲೇಜುಗಳ ನಡೆಯನ್ನು ಸಂಸದರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೋರ್ಟ್ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಲು ಹೈಕೋರ್ಟ್ ಸುತ್ತೋಲೆ
ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ತ್ವಗಳ ಮೇಲೆ ಸರ್ಕಾರ ನಡೆಯುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ನಿಮ್ಮ ಸರ್ಕಾರಕ್ಕೂ ಅಂತಹ ಪದಗಳಿಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಅದು ನಿಜವಾಗಿದ್ದರೆ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಸರ್ಕಾರ ಶಾಲೆಯಿಂದ ಹೊರಗೆ ಕಳಿಸುತ್ತಿರಲಿಲ್ಲ. ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಜೀವಂತವಾಗಿಡಲು ನಾನು ಸರ್ಕಾರವನ್ನು ವಿನಂತಿಸುತ್ತೇನೆ ಎಂದು ಇಮ್ತಿಯಾಜ್ ಜಲೀಲ್ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಶಶಿ ತರೂರ್ , ಪ್ರತಿಯೊಂದು ಧರ್ಮದಲ್ಲೂ ಇಂಥಹ ಆಚರಣೆಗಳು ಇರುತ್ತವೆ. ಹಿಜಾಬ್ ವಿರೋಧಿಸಿದ್ದು ತಪ್ಪು ಎಂದು ಅಭಿಪ್ರಾಯಪಟ್ಟರೆ, ತಪ್ಪಿತಸ್ಥ ಕಾಲೇಜು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಎಂಕೆಯ ಡಾ.ಎಸ್.ಸೆಂಥಿಲ್‌ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.