ನವದೆಹಲಿ : ಕೊರೊನಾ ವೇಳೆ ಮೋದಿ ಸರ್ಕಾರ ಘೋಷಿಸಿದ ಮುಂದಾಲೋಚನೆಯಿಲ್ಲದ ಲಾಕ್ಡೌನ್ನಿಂದಾಗಿ ಲಕ್ಷಾಂತರ ಮಂದಿ ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ನಾಗರಿಕರ ಆರೋಗ್ಯ ಅಪಾಯಕ್ಕೆ ಸಿಲುಕಿದೆ. ವಿದ್ಯಾರ್ಥಿಗಳ ಮಧ್ಯೆ ಡಿಜಿಟಲ್ ವಿಭಾಗೀಕರಣಕ್ಕೆ ಕಾರಣವಾಗಿದೆ. ಈ ಎಲ್ಲಾ ವಿಫಲತೆಗಳನ್ನು ಮುಚ್ಚಿ ಹಾಕಿಕೊಳ್ಳಲು ಭಾರತ ಸರ್ಕಾರ ಸುಳ್ಳುಗಳನ್ನು ಹೇಳುತ್ತಿರುವುದು ಕಹಿ ಸತ್ಯ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
'ಹಥ್ರಾಸ್ ಸಂತ್ರಸ್ತರಿಗೆ ಕಿರುಕುಳ ಕೊಡ್ತಿದೆ ಯುಪಿ ಸರ್ಕಾರ'
ಇದಕ್ಕೂ ಮೊದಲು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಉತ್ತರಪ್ರದೇಶದ ಹಥ್ರಾಸ್ ಅತ್ಯಾಚಾರ ಸಂತ್ರಸ್ತರಿಗೆ ಅಲ್ಲಿನ ಸರ್ಕಾರ ಸತತ ಕಿರುಕುಳ ನೀಡುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಇಡೀ ದೇಶವೇ ಅತ್ಯಾಚಾರ ಸಂತ್ರಸ್ತೆಯ ವಿಚಾರವಾಗಿ ಉತ್ತರಪ್ರದೇಶ ಬಿಜೆಪಿ ಸರ್ಕಾರದಿಂದ ಉತ್ತರವನ್ನು ಬಯಸುತ್ತಿದೆ. ಆದರೆ, ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಕುಟುಂಬಕ್ಕೆ ಅಲ್ಲಿನ ಸರ್ಕಾರ ಕಿರುಕುಳ ನೀಡುತ್ತಿದೆ. ಗೂಂಡಾಗಿರಿ ಹೆಚ್ಚಾಗಿದ್ದು, ಗೂಂಡಾ ರಾಜ್ಯಕ್ಕೆ ಉತ್ತರಪ್ರದೇಶ ಉತ್ತಮ ಉದಾಹರಣೆ ಎಂದು ಯೋಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.