ದಿಬ್ರುಗರ್(ಅಸ್ಸೋಂ) : ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಅಸ್ಸೋಂನ ದಿಬ್ರುಗರ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಕೈಗೊಂಡಿದ್ದಾರೆ.
ದಿಬ್ರುಗರ್ ಜಿಲ್ಲೆಯ ದಿಂಜಾಯ್ ಪ್ರದೇಶದಲ್ಲಿ ಚಹಾ ಎಸ್ಟೇಟ್ ಕಾರ್ಮಿಕರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯದ ಜನತೆಗೆ ಐದು ಪ್ರಮುಖ ಭರವಸೆಗಳನ್ನು ನೀಡಿದ್ದಾರೆ.
ಅಸ್ಸೋಂ ಚಹಾ ಕಾರ್ಮಿಕರಿಗೆ ದಿನಕ್ಕೆ 365 ರೂ. ನೀಡುವುದಾಗಿ ಹೇಳಿದ್ದ ಬಿಜೆಪಿ, ಕೇವಲ 167 ರೂ. ನೀಡುತ್ತಿದೆ. ನಾನು ನರೇಂದ್ರ ಮೋದಿ ಅಲ್ಲ. ನಾನು ಸುಳ್ಳು ಹೇಳುವುದಿಲ್ಲ. ನಿಮಗೆ ಐದು ಭರವಸೆಗಳನ್ನು ನೀಡುತ್ತಿದ್ದೇನೆ.
ಚಹಾ ಕಾರ್ಮಿಕರಿಗೆ ದಿನಕ್ಕೆ 365 ರೂ., ರಾಜ್ಯದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ, 200 ಯೂನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ ತಿಂಗಳಿಗೆ 2000 ರೂ. ಹಣ ನೀಡುವ ಹಾಗೂ ಸಿಎಎ ವಿರುದ್ಧ ನಿಲ್ಲುವ ಗ್ಯಾರಂಟಿ ನೀಡುತ್ತಿದ್ದೇನೆ ಎಂದರು.
ಇದನ್ನೂ ಓದಿ: ನಾಲ್ಕು ವರ್ಷ ಪೂರೈಸಿದ ಆದಿತ್ಯನಾಥ್ ಸರ್ಕಾರ..ಯೋಗಿಯ ಅಭಿವೃದ್ಧಿಯ ಹಾದಿ ಹೀಗಿದೆ
ಚಹಾ ಉದ್ಯಮಕ್ಕಾಗಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾವು ವಿಶೇಷ ಸಚಿವಾಲಯ ಪ್ರಾರಂಭಿಸುತ್ತೇವೆ. ನಮ್ಮ ಪ್ರಣಾಳಿಕೆಯು ಚಹಾ ಕಾರ್ಮಿಕರು, ಜನರ ಪರವಾಗಿರುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಅಸ್ಸೋಂನಲ್ಲಿ ಮಾರ್ಚ್ 27ರಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ 126 ಕ್ಷೇತ್ರಗಳಿಗೆ ಎಲೆಕ್ಷನ್ ನಡೆಯಲಿದೆ.