ರಾಂಚಿ : ಮೇ 22 ರಂದು ತಮ್ಮ ವಿರುದ್ಧದ 'ಮೋದಿ ಉಪನಾಮ' ಬಳಕೆ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ಖುದ್ದು ವಿಚಾರಣೆ ಹಾಜರಾಗುವಂತೆ ಕೆಳ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರ್ಖಂಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮೇ 3 ರಂದು ರಾಂಚಿಯ ಎಂಪಿ - ಎಂಎಲ್‌ಎ ನ್ಯಾಯಾಲಯವು ಪ್ರಕರಣದ ಸಂದರ್ಭದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಸಿಆರ್‌ಪಿಸಿಯ ಸೆಕ್ಷನ್ 305 ಗೆ ಸಂಬಂಧಿಸಿದಂತೆ ಗಾಂಧಿಯವರ ಅರ್ಜಿಯನ್ನು ತಿರಸ್ಕರಿಸಿತ್ತು. ಬದಲಾಗಿ ಈ ಸಂಬಂಧ ಮೇ 22 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಕೆಳ ನ್ಯಾಯಾಲಯವು ಸೂಚಿಸಿತ್ತು. ಇದನ್ನು ಇಂದು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಗಾಂಧಿ ಪರವಾಗಿ ವಕೀಲ ದೀಪಂಕರ್ ರೈ ವಾದ : ಮೇ 22 ರ ಮೊದಲು ಅವರ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸದಿದ್ದರೆ, ನಂತರ ಕೆಳ ನ್ಯಾಯಾಲಯದಲ್ಲಿ ವಿಸ್ತರಣೆಯನ್ನು ಕೋರಲಾಗುವುದು ಎಂದು ಗಾಂಧಿ ಪರವಾಗಿ ವಕೀಲ ದೀಪಂಕರ್ ರೈ ಹೇಳಿದರು.
ಕಾನೂನು ಎಲ್ಲರಿಗೂ ಸಮಾನ ಎಂದ ಹೈಕೋರ್ಟ್ : ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯಲು ಕಾಂಗ್ರೆಸ್ ನಾಯಕರು ಯಾವುದೇ ನಿರ್ದಿಷ್ಟ ಕಾರಣ ಅಥವಾ ಯಾವುದೇ ವಿಶೇಷ ಸಂದರ್ಭಗಳನ್ನು ಉಲ್ಲೇಖಿಸಿಲ್ಲ ಎಂದು ಸಂಸದ-ಶಾಸಕರ ನ್ಯಾಯಾಲಯವು ಗಾಂಧಿಯವರ ಅರ್ಜಿಯನ್ನು ವಜಾಗೊಳಿಸಿತ್ತು. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ವಿಚಾರಣೆ ವೇಳೆ ಗಾಂಧಿ ಹಾಜರಿರಬೇಕು ಎಂದು ಕೋರ್ಟ್ ಕಟ್ಟು ನಿಟ್ಟಿನ ಆದೇಶ ನೀಡಿತ್ತು.
ಇದನ್ನೂ ಓದಿ: ಬಿಜೆಪಿಗೆ 40ರ ಮೇಲೆ ಪ್ರೀತಿ, ಅವರಿಗೆ 40 ಸ್ಥಾನ ಮಾತ್ರ ಕೊಡಿ: ರಾಹುಲ್ ಗಾಂಧಿ
'ಮೋದಿ ಉಪನಾಮ' ಕುರಿತು ಗಾಂಧಿಯವರ ಹೇಳಿಕೆಯ ವಿರುದ್ಧ ಪ್ರದೀಪ್ ಮೋದಿ ಅವರು ಕೆಳ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮೋದಿ ಉಪನಾಮ ಹೊಂದಿರುವ ಜನರೆಲ್ಲರೂ ಏಕೆ ಕಳ್ಳರಾಗಿದ್ದಾರೆ ಎಂಬ ದಾಟಿಯಲ್ಲಿ ರಾಹುಲ್ ಗಾಂಧಿ ಸಭೆಯೊಂದರಲ್ಲಿ ಹೇಳಿದ್ದರು ಎಂದು ವರದಿಯಾಗಿತ್ತು.
ಇದನ್ನೂ ಓದಿ: ಮೋದಿ ಭೇಟಿಗೂ ಮುನ್ನ ಜೂನ್‌ನಲ್ಲಿ ರಾಹುಲ್ ಗಾಂಧಿ ಅಮೆರಿಕ ಪ್ರವಾಸ
ಜಾರ್ಖಂಡ್ ಹೈಕೋರ್ಟ್‌ನಲ್ಲಿ ಒಟ್ಟು ಮೂರು ಪ್ರಕರಣ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್‌ನ ಕೆಳ ನ್ಯಾಯಾಲಯವು ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ಹಿನ್ನಲೆಯಲ್ಲಿ ಲೋಕಸಭಾ ಸದಸ್ಯತ್ವವನ್ನೂ ಕಳೆದುಕೊಂಡಿದ್ದರು. ಗಾಂಧಿಯವರ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಒಟ್ಟು ಮೂರು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.
ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ; ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ತೀರ್ಪನ್ನು ಜಾರ್ಖಂಡ್ ಹೈಕೋರ್ಟ್ ಮೇ 16ರಂದು ಕಾಯ್ದಿರಿಸಿತ್ತು. 2018ರಲ್ಲಿ ಚೈಬಾಸಾದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ: ನಾಳೆ ಜಾರ್ಖಂಡ್ ಹೈಕೋರ್ಟ್‌ನಿಂದ ತೀರ್ಪು ಪ್ರಕಟ