ಚೆನ್ನೈ: 'ಭಾರತ್ ಜೋಡೋ ಯಾತ್ರೆ ಆರಂಭಕ್ಕೂ ಮುನ್ನ ಇಲ್ಲಿಗೆ ಸಮೀಪದ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪುಷ್ಪ ನಮನ ಸಲ್ಲಿಸಿದರು. ಮಂಗಳವಾರ ರಾತ್ರಿ ಇಲ್ಲಿಗೆ ಆಗಮಿಸಿದ ವಯನಾಡ್ ಸಂಸದ ರಾಹುಲ್, ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ದಿನಚರಿ ಆರಂಭಿಸಿದರು. ತಂದೆಯ ಸ್ಮರಣೆಯಲ್ಲಿ ಮೌನ ಪ್ರಾರ್ಥನೆ ಮಾಡಿದರು. ಮೇ 21, 1991 ರಂದು ಶ್ರೀಪೆರಂಬದೂರಿನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು.
ಇದಕ್ಕೂ ಮುನ್ನ ರಾಜೀವ ಗಾಂಧಿ ಸ್ಮಾರಕ ಸ್ಥಳದಲ್ಲಿ ರಾಹುಲ್ ಸಸಿ ನೆಟ್ಟರು. ತಮಿಳುನಾಡು ಕಾಂಗ್ರೆಸ್ ಕಮಿಟಿ ಮುಖ್ಯಸ್ಥ ಕೆ.ಎಸ್.ಅಳಗಿರಿ ಮತ್ತು ಪಕ್ಷದ ಇತರ ಹಿರಿಯ ನಾಯಕರು ಜೊತೆಗಿದ್ದರು.
ಇದರ ನಂತರ ರಾಹುಲ್ ದಕ್ಷಿಣ ಕರಾವಳಿಯ ಕನ್ಯಾಕುಮಾರಿ ಜಿಲ್ಲೆಗೆ ತೆರಳಲಿದ್ದಾರೆ. ಕಾಮರಾಜ್ ಮತ್ತು ಗಾಂಧಿ ಮಂಟಪ ಹಾಗೂ ತಿರುವಳ್ಳುವರ್ ಮತ್ತು ಸ್ವಾಮಿ ವಿವೇಕಾನಂದರ ಅವಳಿ ಸ್ಮಾರಕಗಳಿಗೆ ಭೇಟಿ ನೀಡಿದ ನಂತರ ಅವರು 12 ರಾಜ್ಯಗಳಲ್ಲಿ ಸಂಚರಿಸಲಿರುವ 3,500 ಕಿಮೀ ಉದ್ದದ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಹುಲ್ ಗಾಂಧಿಗೆ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ನೀಡಲಿದ್ದಾರೆ. ಈ ಧ್ವಜವನ್ನು ಪಾದಯಾತ್ರೆ ನಿರ್ವಹಿಸುವ ಸೇವಾದಳದ ಕಾರ್ಯಕರ್ತರಿಗೆ ರಾಹುಲ್ ಹಸ್ತಾಂತರಿಸಲಿದ್ದಾರೆ.