ನವದೆಹಲಿ: ಬ್ರಿಟನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣ ಮತ್ತು ಪೆಗಾಸಸ್ ಮೂಲಕ ಫೋನ್ ಟ್ಯಾಪ್ ಮಾಡಲಾಗಿದೆ ಎಂಬ ಹೇಳಿಕೆ ಬಗ್ಗೆ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ರಾಹುಲ್ ಗಾಂಧಿಯವರ ಭ್ರಮೆ ಬಗ್ಗೆ ನಾವು ಏನು ಹೇಳಬೇಕು. ಚೀನಾದೊಂದಿಗೆ ತಮ್ಮ (ಕಾಂಗ್ರೆಸ್) ಒಪ್ಪಂದವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ, ಅದರ ಬಗ್ಗೆ ತಿಳಿಯಲು ನಾವು ಆಸಕ್ತಿ ಹೊಂದಿದ್ದೇವೆ. ಜೊತೆಗೆ ಭಾರತದ ಜನರು ಸಹ ತಿಳಿದುಕೊಳ್ಳಲು ಬಯಸುತ್ತಾರೆ. ರಾಹುಲ್ ದೂರವಾಣಿ ಸಂಭಾಷಣೆಗಳಲ್ಲಿ ಯಾರಿಗೆ ಆಸಕ್ತಿ ಇದೆ ಎಂದು ಬಿಜೆಪಿ ವಕ್ತಾರ ಟಾಮ್ ವಡಕ್ಕನ್ ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಟಾಮ್ ವಡಕ್ಕನ್, ರಾಹುಲ್ ಗಾಂಧಿಯವರ ಫೋನ್ ಟ್ಯಾಪ್ ಮಾಡುವ ಅಗತ್ಯವಿಲ್ಲ. ಈ ಕುರಿತ ಅವರ ಆರೋಪ ನಿರಾಧಾರವಾಗಿದೆ ಎಂದು ಹೇಳಿದರು. ಇದೇ ವೇಳೆ, ದೇಶದ ಹೊರಗೆ ಭಾರತೀಯರ ಮೇಲೆ ದಾಳಿಯಾದಾಗ ಅವರು (ರಾಹುಲ್) ಯಾವುದೇ ಮಾತನಾಡುವುದಿಲ್ಲ. ಆದರೆ, ವಿದೇಶಕ್ಕೆ ಹೋದಾಗ ಅವರು ಭಾರತದ ಪ್ರಜಾಪ್ರಭುತ್ವದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಬಿಸಿ - ಹಿಂಡೆನ್‌ಬರ್ಗ್ ವರದಿ ಬಗ್ಗೆ ಟೀಕೆ: ಇದೇ ವೇಳೆ ಬಿಬಿಸಿ ಹಣಕಾಸಿನ ಮೂಲದ ಬಗ್ಗೆ ಪ್ರಶ್ನಿಸಿದ ವಡಕ್ಕನ್, ಬಿಬಿಸಿಯ ಸಾಕ್ಷ್ಯಚಿತ್ರ ಮತ್ತು ಹಿಂಡೆನ್‌ಬರ್ಗ್ ವರದಿಯನ್ನು ಗಮನಿಸಿದರೆ, ಒಂದೇ ಚೌಕಟ್ಟಿನಡಿ ಹಲವಾರು ವಿಷಯಗಳು ಬಯಲಿಗೆ ಬರುತ್ತದೆ ಎಂದರು. ದೇಶದಲ್ಲಿ ಇರುವ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಪಾವತಿಸಬೇಕು. ಇದು ತೆರಿಗೆ ಇಲಾಖೆಯ ದಾಳಿ ಅಲ್ಲ, ಇದು ಕೇವಲ ಸಮೀಕ್ಷೆಯಾಗಿದೆ. ಬಿಬಿಸಿ ಅದರ ಬಗ್ಗೆ ಸಾಕ್ಷ್ಯಚಿತ್ರವನ್ನು ಏಕೆ ಮಾಡಲಿಲ್ಲ?, ಬಿಬಿಸಿ ತನ್ನ ಹಣಕಾಸಿನ ಮೂಲದ ಬಗ್ಗೆ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಮೋದಿ ಪ್ರಪಂಚದ ಎಲ್ಲ ನಾಯಕರಿಗಿಂತ ಅತ್ಯಂತ ಪ್ರೀತಿ ಪಾತ್ರರು: ಇಟಲಿ ಪ್ರಧಾನಿ ಅಭಿಮತ
ಮತ್ತೊಂದೆಡೆ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಪೆಗಾಸಸ್ ಕುರಿತ ತನಿಖೆ ಮಾಡಲು ಸುಪ್ರೀಂಕೋರ್ಟ್ ತಾಂತ್ರಿಕ ಸಮಿತಿ ನೇಮಿಸಿದೆ. ಈ ಸಮಿತಿಗೆ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ತಮ್ಮ ಫೋನ್‌ಗಳನ್ನು ಸಲ್ಲಿಸದಂತೆ ತಡೆದಿರುವುದು ಯಾರು ಎಂಬುದೇ ಆಶ್ಚರ್ಯವಾಗುತ್ತಿದೆ ಎಂದು ಕುಟುಕಿದರು.
ಮೋದಿ ಬಗ್ಗೆ ಇಟಲಿ ಪ್ರಧಾನಿ ಮಾತು ಕೇಳಿ: ಅಲ್ಲದೇ, ಪ್ರಧಾನಿ ಮೇಲಿನ ಅವರ (ಕಾಂಗ್ರೆಸ್) ದ್ವೇಷವನ್ನು ನಾವು ಅರ್ಥಮಾಡಿಕೊಳ್ಳಬಹುದು. ವಿದೇಶಿ ಸ್ನೇಹಿತರ ಸಹಾಯದಿಂದ ವಿದೇಶಿ ನೆಲದಲ್ಲಿ ದೇಶದ ಹೆಸರನ್ನು ಕೆಡಿಸುವ ಪಿತೂರಿ ಇದು. ಕಾಂಗ್ರೆಸ್ನ ಕಾರ್ಯಸೂಚಿಯ ಮೇಲೂ ಹಲವು ಪ್ರಶ್ನೆಗಳು ಹುಟ್ಟುಕೊಳ್ಳುತ್ತೇವೆ. ಅಷ್ಟೇ ಅಲ್ಲ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಗೊತ್ತಿತ್ತು. ಹೀಗಾಗಿ ವಿದೇಶಿ ನೆಲದಿಂದ ಭಾರತದ ಹೆಸರಿಗೆ ಕಳಂಕ ಉಂಟು ಮಾಡುವ ಹೇಳಿಕೆ ನೀಡಿರುವುದು ಅವರ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿಯವರ ಬಗ್ಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಏನು ಹೇಳಿದ್ದಾರೆ ಎಂಬುದನ್ನಾದರೂ ರಾಹುಲ್ ಗಾಂಧಿ ಕೇಳಬೇಕಾಗಿತ್ತು ಎಂದು ಅನುರಾಗ್ ಠಾಕೂರ್ ಟೀಕಾ ಪ್ರಹಾರ ಮಾಡಿದರು.
ರಾಹುಲ್ ಗಾಂಧಿ ಒಂದು ವಾರ ಬ್ರಿಟನ್ ಪ್ರವಾಸದಲ್ಲಿದ್ದಾರೆ. ಇಲ್ಲಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿ, ತಮ್ಮ ಫೋನ್‌ನಲ್ಲಿ ಪೆಗಾಸಸ್ ಇರುವುದರಿಂದ ಮಾತನಾಡುವಾಗ ಜಾಗರೂಕರಾಗಿರಿ ಎಂದು ಗುಪ್ತಚರ ಅಧಿಕಾರಿಗಳು ನನಗೆ ಹೇಳಿದ್ದರು. ಜೊತೆಗೆ ಹಲವು ರಾಜಕಾರಣಿಗಳಿಗೆ ತಮ್ಮ ಫೋನ್‌ಗಳಲ್ಲಿ ಈ ಬೇಹುಗಾರಿಕೆ ಸಾಧನ ಹೊಂದಿರುವ ಅನುಭವ ಆಗಿದೆ. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿಕೆ ಕೊಟ್ಟಿದ್ದರು.
ಇದನ್ನೂ ಓದಿ: ಪೆಗಾಸಸ್ ಮೂಲಕ ನನ್ನ ಫೋನ್ ಮೇಲೆ ಗೂಢಚಾರಿಕೆ; ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ರಾಹುಲ್ ಗಾಂಧಿ