ಪಾಟ್ನಾ (ಬಿಹಾರ): ಫ್ಲೈಯಿಂಗ್ ಕಿಸ್ ಕುರಿತಂತೆ ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ತಮ್ಮದೇ ಧಾಟಿಯಲ್ಲಿ ಹೊಸ ವ್ಯಾಖ್ಯಾನ ನೀಡುವ ಮೂಲಕ ಸುದ್ದಿಗೆ ಆಹಾರವಾಗಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಫ್ಲೈಯಿಂಗ್ ಕಿಸ್ ವಿಚಾರದ ಕುರಿತು ಗುರುವಾರ ನದಾವಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ನೀತು ಸಿಂಗ್, ''ನಮ್ಮ ನಾಯಕರು (ರಾಹುಲ್ ಗಾಂಧಿ) ಫ್ಲೈಯಿಂಗ್ ಕಿಸ್ ನೀಡಿದರೆ, ಅವರು ಅದನ್ನು ಹುಡುಗಿಗೆ ನೀಡುತ್ತಾರೆಯೇ ಹೊರತು 50 ವರ್ಷದ ಬುಧಿಯಾ (ವೃದ್ಧೆ) ಗೆ ಅಲ್ಲ'' ಎಂದಿದ್ದಾರೆ. ಅವರ ಈ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
''50 ವರ್ಷದ ಮಹಿಳೆಗೆ ರಾಹುಲ್ ಗಾಂಧಿ ಏಕೆ ಫ್ಲೈಯಿಂಗ್ ಕಿಸ್ ನೀಡುತ್ತಾರೆ? ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಗರು ಮಾಡುತ್ತಿರುವ ಆರೋಪಗಳು ಆಧಾರರಹಿತ. ರಾಹುಲ್ ಗಾಂಧಿ ಅವರಿಗೆ ಹುಡುಗಿಯರ ಕೊರತೆ ಇಲ್ಲ. ಒಂದು ವೇಳೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದರೆ, ಅವರು ಅದನ್ನು ಹುಡುಗಿಗೆ ನೀಡುತ್ತಾರೆಯೇ ಹೊರತು ವಯಸ್ಸಾದ ಮಹಿಳೆಗೆ ಏಕೆ ನೀಡುತ್ತಾರೆ'' ಎಂದು ಪ್ರಶ್ನಿಸಿದ್ದಾರೆ. ''ಸ್ಮೃತಿ ಇರಾನಿ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳೆಲ್ಲವೂ ನಿರಾಧಾರ. ಇದು ರಾಹುಲ್ ಗಾಂಧಿ ಅವರ ಇಮೇಜ್ ಕೆಡಿಸುವ ಪ್ರಯತ್ನ" ಎಂದಿದ್ದಾರೆ.
''ಸ್ಮೃತಿ ಇರಾನಿ ಅವರಿಗೆ ನಾಚಿಕೆಯಾಗಬೇಕು. ನಮ್ಮ ನಾಯಕರ (ರಾಹುಲ್ ಗಾಂಧಿ) ವಿರುದ್ಧ ಆರೋಪ ಮಾಡುವ ಮುನ್ನ ತಾವು ಈ ಹಿಂದೆ ಏನೆಲ್ಲ ಮಾಡಿದ್ದೇವೆ ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು'' ಎಂದು ನೀತು ಸಿಂಗ್ ಟಾಂಗ್ ಕೊಟ್ಟಿದ್ದಾರೆ. ''ನಾವೂ ಕೂಡ ವಿಡಿಯೋವನ್ನು ನೋಡಿದ್ದೇವೆ. ಅಲ್ಲಿ ಅಂತಹದ್ದೇನೂ ನಡೆದಿಲ್ಲ. ರಾಹುಲ್ ಗಾಂಧಿಯವರು ಸ್ಪೀಕರ್ ಕಡೆಗೆ ಬೆರಳು ತೋರಿಸುತ್ತಿದ್ದರು. ಆದರೆ, ರಾಹುಲ್ ಗಾಂಧಿ ತನಗೆಯೇ ಫ್ಲೈಯಿಂಗ್ ಕಿಸ್ ನೀಡುತ್ತಿದ್ದಾರೆಂದು ಸ್ಮೃತಿ ಇರಾನಿ ಹೇಗೆ ಅರ್ಥಮಾಡಿಕೊಂಡರು ಅನ್ನೋದು ನಮಗೆ ಗೊತ್ತಾಗುತ್ತಿಲ್ಲ. ಇದೆಲ್ಲವೂ ಸ್ಮೃತಿ ಇರಾನಿ ಅವರ ಯೋಜಿತ ಪಿತೂರಿ. ಈ ಮೂಲಕ ವಿನಾ ಕಾರಣ ಒಬ್ಬರ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ'' ಎಂದಿದ್ದಾರೆ.
ಆದರೆ, ನೀತು ಸಿಂಗ್ ಅವರ ಈ ಹೇಳಿಕೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಹಲವರು ಅವರ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ''ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಮಾಡಿರುವ ಟೀಕೆ ದುರದೃಷ್ಟಕರ'' ಎಂದು ಬಿಜೆಪಿಯ ಹಿರಿಯ ನಾಯಕ ಅರವಿಂದ್ ಕುಮಾರ್ ಸಿಂಗ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ಅವರು ಕೂಡ ಒಬ್ಬ ಮಹಿಳೆ. ಕಾಂಗ್ರೆಸ್ ಶಾಸಕಿ ಕೂಡ ಹೌದು. ಜನಪ್ರತಿನಿಧಿಯಾದ ಮಹಿಳೆ ಇಂತಹ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ. ಇದು ಅವರ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಇಂತಹ ಮನಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ನಾವು ಮಹಿಳೆಯರನ್ನು ಗೌರವಿಸುವವರು. 'ದೇವಿ' ಅಥವಾ 'ದುರ್ಗಾ' ಅಂತ ಅಂದುಕೊಂಡವರು. ಆದರೆ, ಕಾಂಗ್ರೆಸ್ ನಾಯಕರು ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವ ಮೂಲಕ ಮಹಿಳೆಯರ ಗೌರವಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ'' ಎಂದು ಅರವಿಂದ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಸಮರ್ಥನೆ: ''ಇದು ಪ್ರೀತಿಯ ಸೂಚಕ. ಯಾವುದೇ ಮಹಿಳಾ ಸಂಸದರನ್ನು ಗುರಿಯಾಗಿಸಿಕೊಂಡು ಮಾಡಿದ್ದಲ್ಲ. ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ತಮ್ಮ ಭಾಷಣ ಮುಗಿಸಿದ ಬಳಿಕ ನಿರ್ಗಮಿಸುತ್ತಿದ್ದರು. ಈ ವೇಳೆ, ಅವರು ತಾನು ಹೊರಡುತ್ತಿದ್ದೇನೆ ಎಂದು ಆ ರೀತಿ ಸಾಂಕೇತಿಕವಾಗಿ ಹೇಳಿದ್ದಾರೆ ಅಷ್ಟೇ ಎಂದು ಹೇಳುವ ಮೂಲಕ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದೆ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಫ್ಲೈಯಿಂಗ್ ಕಿಸ್ ವಿಚಾರವನ್ನು ಸಮರ್ಥಿಸಿಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.
ಇದನ್ನೂ ಓದಿ: No Confidence Motion: ಮೋದಿ ಸರ್ಕಾರದ ವಿರುದ್ಧದ ಪ್ರತಿಪಕ್ಷಗಳ 'ಅವಿಶ್ವಾಸ ನಿರ್ಣಯ'ಕ್ಕೆ ಸೋಲು