ಪುರಿ (ಒಡಿಶಾ): ಕಾಲೇಜಿಗೆ ಬಂದು ಸೇರಿದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸೀನಿಯರ್ಗಳು ರ್‍ಯಾಗಿಂಗ್ ಮಾಡುವುದು ಅಲ್ಲಲ್ಲಿ ಕಂಡು ಬರುತ್ತದೆ. ಈಗ ಒಡಿಶಾದ ಶ್ರೀಜಗನ್ನಾಥ್ ವೈದ್ಯಕೀಯ ಕಾಲೇಜಿನಲ್ಲಿ ರ್‍ಯಾಗಿಂಗ್ ಆರೋಪ ಕೇಳಿ ಬಂದಿದೆ. ದ್ವಿತೀಯ ವರ್ಷದ ವಿದ್ಯಾರ್ಥಿಗಳು ಜೂನಿಯರ್ ಗಡ್ಡದ ಬಗ್ಗೆ ಹಾಸ್ಯ ಮಾಡಿ, ಬೋಳಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಬಗ್ಗೆ ತನಿಖೆಗಳು ನಡೆಯುತ್ತಿವೆ.
ಐದು ದಿನಗಳ ಹಿಂದೆ ಅಂದರೆ ಆಗಸ್ಟ್ 17 ರಂದು ಶ್ರೀ ಜಗನ್ನಾಥ್ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಗೆ ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ರ್‍ಯಾಗಿಂಗ್ ಮಾಡಿದ್ದಾರೆ. ಸಿನಿಯರ್ಗಳು ಪ್ರಥಮ ವರ್ಷದ ವಿದ್ಯಾರ್ಥಿಯ ಗಡ್ಡವನ್ನು ಸಂಪೂರ್ಣವಾಗಿ ಅಲ್ಲೇ ತೆಗೆಸಿದ್ದಾರೆ.
ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಕಾಲೇಜಿನಲ್ಲಿರುವ ರ್‍ಯಾಗಿಂಗ್ ವಿರೋಧಿ ಸಮಿತಿ ಈ ಬಗ್ಗೆ ಚರ್ಚಿಸಿದೆ. ನಂತರ ಕಾಲೇಜು ವ್ಯಾಪ್ತಿಗೆ ಒಳಪಡುವ ಮರೈನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ. ಶ್ರೀಜಗನ್ನಾಥ್ ವೈದ್ಯಕೀಯ ಕಾಲೇಜಿನಲ್ಲಿ ರ್‍ಯಾಗಿಂಗ್ ಕುರಿತು ದಾಖಲಾದ ಮೊದಲ ಘಟನೆ ಇದು ಎಂದು ಹೇಳಲಾಗುತ್ತಿದೆ. ರ್‍ಯಾಗಿಂಗ್ ವಿರೋಧಿ ಸಮಿತಿ ಕಾಲೇಜಿನಲ್ಲಿ ಸಕ್ರಿಯವಾಗಿದ್ದು ಇಂತಹ ಘಟನೆಗಳ ಮೇಲೆ ನಿಗಾ ಇರಿಸಿದೆ ಎಂದು ಕಾಲೇಜು ಪ್ರಾಧಿಕಾರ ತಿಳಿಸಿದೆ. ಆ. 17 ರಂದು ನಡೆದ ಘಟನೆಯ ಬಗ್ಗೆ ತಿಳಿಸಿದ ನಂತರ ಭಾನುವಾರದಂದು ರ್‍ಯಾಗಿಂಗ್ ವಿರೋಧಿ ಸಮಿತಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
ಪ್ರತಿಷ್ಠಿತ ಶ್ರೀಜಗನ್ನಾಥ್ ವೈದ್ಯಕೀಯ ಕಾಲೇಜಿನ ಈ ಘಟನೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಕಾಲೇಜಿನ ಡೀನ್ ಮಾತಾನಾಡಿ,"ಈ ಹಿಂದೆ ಇಂತಹ ಘಟನೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಆ್ಯಂಟಿ ರ್‍ಯಾಗಿಂಗ್ ಸೆಲ್ ರಚಿಸಿ ತನಿಖೆ ಆರಂಭಿಸಲಾಗಿದೆ" ಎಂದು ತಿಳಿಸಿದ್ದಾರೆ.
ರ್‍ಯಾಗಿಂಗ್ ಘಟನೆ ಬಗ್ಗೆ ವಿದ್ಯಾರ್ಥಿಗಳು ಅಸಮಧಾನ ಹೊರಹಾಕಿದ್ದು, ಪೊಲೀಸರು ಮತ್ತು ಆ್ಯಂಟಿ ರ್‍ಯಾಗಿಂಗ್ ಸೆಲ್ ತೀವ್ರವಾಗಿ ಈ ಘಟನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪುರಿ ಎಸ್ಪಿ ಡಾ.ಕನ್ವರ್ ವಿಶಾಲ್ ಸಿಂಗ್, ''ತನಿಖೆ ಆರಂಭಿಸಲಾಗಿದೆ, ಪೊಲೀಸರು ರ್‍ಯಾಗಿಂಗ್ ಘಟನೆಗೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ತನಿಖೆಯ ನಂತರ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ರ್‍ಯಾಗಿಂಗ್ ಕುರಿತಾದ ಜಾಗೃತಿ ಕಾರ್ಯಾಗಾರಗಳನ್ನು ಪುರಿಯ ವಿವಿಧ ಕಾಲೇಜುಗಳಲ್ಲಿ ಶೀಘ್ರದಲ್ಲೇ ಆಯೋಜಿಸಲಾಗುವುದು" ಎಂದಿದ್ದಾರೆ.
ಇದನ್ನೂ ಓದಿ: Mother murder: ಪುತ್ರನ ಮೊಬೈಲ್ನಿಂದ ಅಪರಿಚಿತ ವ್ಯಕ್ತಿಗೆ ತಾಯಿ ಮೆಸೇಜ್; ಅನುಮಾನಿಸಿ ಹೆತ್ತಮ್ಮನನ್ನೇ ಹತ್ಯೆಗೈದ ಮಗ!