ಬ್ರಿಟನ್ನ ದೀರ್ಘಾವಧಿಯ ಮಹಾರಾಣಿ ರಾಣಿ ಎಲಿಜಬೆತ್-2 ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಕೊಹಿನೂರ್ ವಜ್ರದ ವಿಷಯ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಯಿದೆ.
ಪ್ರಿನ್ಸ್ ಚಾರ್ಲ್ಸ್ ಅವರು ಪಟ್ಟಕ್ಕೇರಿದ ನಂತರ ಅವರ ಪತ್ನಿ, ಡಚೆಸ್ ಆಫ್ ಕಾರ್ನವಾಲ್ ಕ್ಯಾಮಿಲಾ ಅವರು ರಾಣಿಯ ಸ್ಥಾನ ಪಡೆಯಲಿದ್ದಾರೆ ಎಂದು ಈ ವರ್ಷಾರಂಭದಲ್ಲಿ ಕ್ವೀನ್ ಎಲಿಜಬೆತ್ ಘೋಷಿಸಿದ್ದರು. ಇದರ ಪ್ರಕಾರ ಜಗತ್ ಪ್ರಸಿದ್ಧ ಕೊಹಿನೂರ್ ವಜ್ರವು ಕ್ಯಾಮಿಲಾ ಅವರ ಸುಪರ್ದಿಗೆ ಸಿಗಲಿದೆ.
ಕೊಹಿನೂರ್ ಇದು 105.6 ಕ್ಯಾರೆಟ್ನ ಐತಿಹಾಸಿಕ ಹಿನ್ನೆಲೆಯ ವಜ್ರವಾಗಿದೆ. 14ನೇ ಶತಮಾನದಲ್ಲಿ ಭಾರತದಲ್ಲಿ ದೊರೆತ ಈ ವಜ್ರವು ಅಂದಿನಿಂದ ಈವರೆಗೆ ಹಲವಾರು ಕೈಗಳನ್ನು ದಾಟಿದೆ. 1849ರಲ್ಲಿ ಬ್ರಿಟಿಷರು ಪಂಜಾಬನ್ನು ವಶಪಡಿಸಿಕೊಂಡ ನಂತರ ಕ್ವೀನ್ ವಿಕ್ಟೋರಿಯಾ ಅವರ ಸುಪರ್ದಿಗೆ ಡೈಮಂಡ್ ಸೇರಿತ್ತು. ಆಗಿನಿಂದ ಇದು ಬ್ರಿಟಿಷ್ ಕಿರೀಟದ ಆಭರಣಗಳಲ್ಲೊಂದಾಗಿದೆ. ಆದರೆ ಇದರ ಮಾಲೀಕತ್ವ ಕುರಿತಂತೆ ಭಾರತ ಸೇರಿದಂತೆ ಕನಿಷ್ಠ ನಾಲ್ಕು ದೇಶಗಳ ಮಧ್ಯೆ ಕಾನೂನು ಹೋರಾಟ ನಡೆದಿದೆ.
1937ರಲ್ಲಿ ಕಿಂಗ್ ಜಾರ್ಜ್ -6 ಅವರ ರಾಜ್ಯಾಭಿಷೇಕದ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಪಾಲ್ಗೊಳ್ಳುವಾಗ ಕ್ವೀನ್ ಎಲಿಜಬೆತ್ (ನಂತರ ಇವರನ್ನು ಕ್ವೀನ್ ಮದರ್ ಎಂದು ಕರೆಯಲಾಯಿತು) ಧರಿಸಿದ್ದ ಪ್ಲಾಟಿನಂ ಕಿರೀಟದಲ್ಲಿ ಕೊಹಿನೂರ್ ವಜ್ರವನ್ನು ಸೇರಿಸಲಾಗಿತ್ತು. ಈ ಕಿರೀಟವನ್ನು ಟವರ್ ಆಫ್ ಲಂಡನ್ನಲ್ಲಿ ಪ್ರದರ್ಶನ ಮಾಡಲಾಗಿದೆ. ಪ್ರಿನ್ಸ್ ಚಾರ್ಲ್ಸ್ ಅವರ ಕಿಂಗ್ ಪಟ್ಟಾಭಿಷೇಕ ಸಮಯದಲ್ಲಿ ರಾಣಿ ಕ್ಯಾಮಿಲಾ ಈ ಕಿರೀಟವನ್ನು ತಮ್ಮ ತಲೆಗೆ ಧರಿಸಲಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: 'ಕೊಹಿನೂರ್ ವಜ್ರ ಹಿಂತಿರುಗಿಸಲು ಹೇಳಿ..': ಬ್ರಿಟಿಷ್ ಕಮೆಂಟೇಟರ್ಗೆ ಗವಾಸ್ಕರ್ ಬೇಡಿಕೆ