ನವದೆಹಲಿ: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಸರ್ಕಾರ ಅನುಮೋದಿತ ಮಾತ್ರೆಗಳು, ಔಷಧಗಳಿಗೆ ಸೇರ್ಪಡೆ ಮಾಡುವ ಮಿಶ್ರಣಗಳನ್ನು ಶಿಫಾರಸು ಮಾಡಲು ಆಯುಷ್ ವೈದ್ಯರು ಮತ್ತು ಹೋಮಿಯೋಪಥಿಗಳಿಗೆ ಮಾತ್ರ ಅನುಮತಿ ಇದೆ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇದು 'ಕೊರೊನಾ ಪರಿಹಾರ' ಎಂಬುದಾಗಿ ಪ್ರಚಾರ ಮಾಡಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿತು.
ಯಾವುದೇ ಔಷಧಿಯನ್ನು ಕೋವಿಡ್ ಪರಿಹಾರ ಎಂಬುದಾಗಿ ಶಿಫಾರಸು ಮಾಡದಂತೆ ಆಯುಷ್ ವೈದ್ಯರಿಗೆ ನಿರ್ದೇಶನ ನೀಡಿರುವ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಡಾ.ಎ.ಕೆ.ಬಿ.ಸದ್ಭವ್ನಾ ಮಿಷನ್ ಸ್ಕೂಲ್ ಆಫ್ ಹೋಮಿಯೋ ಫಾರ್ಮಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ, ಎಂ.ಆರ್.ಶಾ ಅವರಿದ್ಧ ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತು.
ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಪ್ರತಿಯೊಬ್ಬರಿಗೂ ಅನುಮತಿ ನೀಡಲಾಗುವುದಿಲ್ಲ. ಕೇವಲ ಅರ್ಹ ಆಯುಷ್ ವೈದ್ಯರು ಮತ್ತು ಹೋಮಿಯೋಪತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೋಮಿಯೋಪತಿಗಳು ರೋಗನಿರೋಧಕ ಮಾತ್ರೆಗಳ ಕುರಿತು ಮಾತ್ರ ಜಾಹೀರಾತು ಮಾಡಬಹುದು. ಆದರೆ, ಚಿಕಿತ್ಸೆಗೆ ಅಲ್ಲ ಎಂದು ತಿಳಿಸಿದೆ. ಸರ್ಕಾರ ಮತ್ತು ಸರ್ಕಾರೇತರ ಅಧಿಕಾರಿಗಳು ಕೋವಿಡ್‌ಗೆ ಚಿಕಿತ್ಸೆ ನೀಡಬಾರದು ಎಂದೂ ಸೂಚಿಸಿದೆ.
ಆಯುಷ್ ಸಚಿವಾಲಯವು ಮಾರ್ಚ್ 6ರಂದು ಬಿಡುಗಡೆಗೊಳಿಸಿರುವ ಅಧಿಸೂಚನೆಯಲ್ಲಿ ಸೂಚಿಸಿದಂತೆ ಕೋವಿಡ್ -19ಗೆ ಸಂಬಂಧಿಸಿದಂತೆ ವೈದ್ಯರಿಗೆ ನೀಡಲಾದ ಮಾರ್ಗಸೂಚಿಗಳನ್ನು ಆಯುಷ್ ವೈದ್ಯರು ಪಾಲಿಸಬೇಕು ಎಂದು ಸೂಚಿಸಿದೆ. ಸೋಂಕು ಗುಣಪಡಿಸಲು ಔಷಧಿಗಳನ್ನು ಜಾಹೀರಾತು ನೀಡುವುದು ಅಥವಾ ಶಿಫಾರಸು ಮಾಡುವುದನ್ನು ನಿಷೇಧಿಸಿರುವ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಡಿಸೆಂಬರ್ 2ರಂದು ಕಾಯ್ದಿರಿಸಿತ್ತು.