ನವದೆಹಲಿ: ಉನ್ನತ ಶಿಕ್ಷಣ ಕ್ಷೇತ್ರದ ಪ್ರತಿಷ್ಠಿತ ಕ್ಯೂಎಸ್ ಏಷ್ಯಾ ವಿಶ್ವವಿದ್ಯಾನಿಲಯಗಳ ಶ್ರೇಯಾಂಕ ಪಟ್ಟಿ ಬಿಡುಗಡೆಗೊಂಡಿದೆ. ಟಾಪ್ 200 ವಿಶ್ವವಿದ್ಯಾನಿಲಯಗಳಲ್ಲಿ 19 ಭಾರತೀಯ ವಿಶ್ವವಿದ್ಯಾನಿಲಯಗಳ ಹೆಸರಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಈ ವರ್ಷ 40 ನೇ ಶ್ರೇಯಾಂಕದೊಂದಿಗೆ ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ.
ಈ ವರ್ಷ QS ಏಷ್ಯಾ ವಿಶ್ವವಿದ್ಯಾನಿಲಯಗಳ ಶ್ರೇಯಾಂಕದಲ್ಲಿ ಭಾರತೀಯ ವಿಶ್ವವಿದ್ಯಾನಿಲಯಗಳ ಸಂಖ್ಯೆ ಅಧಿಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರ್ಯಾಂಕಿಂಗ್ನಲ್ಲಿ ಸುಧಾರಣೆ ಕಂಡುಬಂದಿದ್ದು, 8 ಭಾರತೀಯ ವಿಶ್ವವಿದ್ಯಾನಿಲಯಗಳು ತಮ್ಮ ಶ್ರೇಯಾಂಕಗಳನ್ನು ಸುಧಾರಿಸಿಕೊಂಡಿವೆ.
ಲಂಡನ್‌ನಲ್ಲಿರುವ ಕ್ವಾಕ್ವಾರೆಲಿ ಸೈಮಂಡ್ಸ್ ಎಂಬ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಕ ಸಂಸ್ಥೆ ಕಳೆದ ಹಲವು ವರ್ಷಗಳಿಂದಲೂ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿ ಪ್ರಕಟಿಸುತ್ತಲೇ ಬಂದಿದ್ದು, ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯಗಳ ಶ್ರೇಯಾಂಕ 2023 ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಐಐಟಿ ಬಾಂಬೆ ಭಾರತದ ಅತ್ಯತ್ತಮ ಶಿಕ್ಷಣ ಸಂಸ್ಥೆ..ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ
ಈ ವರ್ಷ ಟಾಪ್ 200 ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ ಸ್ಥಾನ ಪಡೆದ ಯೂನಿವರ್ಸಿಟಿಗಳೆಂದರೆ, ಐಐಟಿ ಬಾಂಬೆ (40 ನೇ), ಐಐಟಿ ದೆಹಲಿ (46 ನೇ), ಐಐಎಸ್‌ಸಿ ಬೆಂಗಳೂರು (52), ಐಐಟಿ ಮದ್ರಾಸ್ (53) , ಐಐಟಿ ಖರಗ್‌ಪುರ (61), ಐಐಟಿ ಕಾನ್ಪುರ (66), ದೆಹಲಿ ವಿಶ್ವವಿದ್ಯಾಲಯ (85), ಐಐಟಿ ರೋರ್ಕಿ (114), ಜೆಎನ್‌ಯು (119), ಐಐಟಿ ಗುವಾಹಟಿ (124), ವಿಐಟಿ ವೆಲ್ಲೂರ್ (173), ಕಲ್ಕತ್ತಾ ವಿಶ್ವವಿದ್ಯಾಲಯ (181), ಜಾದವ್‌ಪುರ ವಿಶ್ವವಿದ್ಯಾಲಯ (182), ಅಣ್ಣಾ ವಿಶ್ವವಿದ್ಯಾಲಯ (185), ಚಂಡೀಗಢ ವಿಶ್ವವಿದ್ಯಾಲಯ (185), IIT ಇಂದೋರ್ (185), BITS ಪಿಲಾನಿ (188), ಜಾಮಿಯಾ ಮಿಲಿಯಾ ಇಸ್ಲಾಮಿಯಾ (188), ಮತ್ತು ಅಮಿಟಿ ವಿಶ್ವವಿದ್ಯಾಲಯ ನೋಯ್ಡಾ (200) ನೇ ರ್‍ಯಾಂಕ್ ಪಡೆದುಕೊಂಡಿದೆ.
ಇದನ್ನೂ ಓದಿ: ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳ ಪ್ರಶಸ್ತಿ ಪ್ರಕಟ
"ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಹೊಸ ಶಿಕ್ಷಣ ನೀತಿಯ ಫಲಿತಾಂಶದಿಂದಾಗಿ ಪ್ರತಿ ವರ್ಷ ಹೆಚ್ಚು ಹೆಚ್ಚು ಭಾರತೀಯ ವಿಶ್ವವಿದ್ಯಾನಿಲಯಗಳು ಜಾಗತಿಕ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿವೆ. NEP 2020 ರಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಅವಕಾಶಗಳನ್ನು ನೀಡುತ್ತಿದೆ" ಎಂದು ಚಂಡೀಗಢ ವಿಶ್ವವಿದ್ಯಾಲಯದ ಕುಲಪತಿ ಸತ್ನಮ್ ಸಿಂಗ್ ಸಂಧು ಹೇಳಿದ್ದಾರೆ.