ಸಂಬಲ್ಪುರ: ಪುರಿ-ಸೂರತ್ ಎಕ್ಸ್‌ಪ್ರೆಸ್ ಟ್ರೈನ್ ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿರುವ ಘಟನೆ ಇಲ್ಲಿನ ಹತಿಬಾರಿ ಮತ್ತು ಮನೇಶ್ವರ ನಿಲ್ದಾಣಗಳ ನಡುವೆ ಭಾಬನಿಪಲ್ಲಿ ಎಂಬಲ್ಲಿ ಸಂಭವಿಸಿದೆ.
ತಡರಾತ್ರಿ 2:04ಕ್ಕೆ ಆನೆಯೊಂದು ಎಕ್ಸ್‌ಪ್ರೆಸ್ ರೈಲಿಗೆ ಅಡ್ಡ ಬಂದಿದೆ. ರೈಲು ಆನೆಗೆ ಡಿಕ್ಕಿ ಹೊಡಿದು ಹಳಿ ತಪ್ಪಿದೆ. ಈ ಘಟನೆಯಲ್ಲಿ ಆನೆ ದೇಹ ಸಂಪೂರ್ಣ ಛಿದ್ರವಾಗಿದೆ.
ರೈಲು ರಾತ್ರಿ 1:55 ಕ್ಕೆ ಎಲಿಫೆಂಟ್ ಬ್ಯಾರಿ ನಿಲ್ದಾಣವನ್ನು ದಾಟಿ ಮುಂದಕ್ಕೆ ಪ್ರಯಾಣಿಸುತ್ತಿದ್ದಾಗ ಆನೆಯೊಂದು ರೈಲಿಗೆ ಅಡ್ಡಬಂದಿದ್ದರಿಂದ ಈ ಅವಘಡ ನಡೆದಿದೆ. ರೈಲಿನ ವೇಗ ಕಡಿಮೆ ಇರುವುದರಿಂದ ಎಂಜಿನ್ ಮಾತ್ರ ಹಳಿ ತಪ್ಪಿದೆ ಎಂದು ವರದಿಯಾಗಿದೆ.
ಪುರಿ - ಸೂರತ್ ಎಕ್ಸ್‌ಪ್ರೆಸ್ ರೈಲು ಪುರಿಯಿಂದ ಸಂಬಲ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯರ ನೆರವಿನಿಂದ ರೈಲ್ವೆ ಅಧಿಕಾರಿಗಳು ಎಂಜಿನ್ ಅಡಿಯಲ್ಲಿ ಸಿಲುಕೊಂಡಿರುವ ಆನೆ ಮೃತದೇಹವನ್ನು ತೆಗೆದು ಹಾಕಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಕಾರ್ಯಾಚರಣೆ ಬಳಿಕ ಬೆಳಗ್ಗೆ 5:55 ಕ್ಕೆ ರೈಲು ಆ ಸ್ಥಳದಿಂದ ನಿರ್ಗಮಿಸಿತು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.