ಲೂಧಿಯಾನ್(ಪಂಜಾಬ್): ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಪಂಜಾಬ್ ಶಾಸಕ ಹಾಗೂ ಲೋಕ್ ಇನ್ಸಾಫ್ ಪಕ್ಷದ ಮುಖ್ಯಸ್ಥನ ವಿರುದ್ಧ ಪ್ರಕರಣ ದಾಖಲಾಗಿದೆ. ಸಹಾಯ ಮಾಡುವ ನೆಪದಲ್ಲಿ ಮೇಲಿಂದ ಮೇಲೆ ದುಷ್ಕೃತ್ಯವೆಸಗಿದ್ದಾನೆಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
44 ವರ್ಷದ ಮಹಿಳೆಯೋರ್ವಳು ನೀಡಿರುವ ದೂರಿನ ಅನ್ವಯ ಅತ್ಯಾಚಾರ, ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪಂಜಾಬ್ ಶಾಸಕ ಸಿಮಾರ್ಜಿತ್ ಸಿಂಗ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ದೇಶನ ಸಹ ನೀಡಿದ್ದು, ಹೀಗಾಗಿ ಶಾಸಕ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಮಹಿಳೆಗೆ ಆರ್ಥಿಕವಾಗಿ ಸಹಾಯ ಮಾಡುವ ನೆಪದಲ್ಲಿ ಶಾಸಕ ತನ್ನ ಕಚೇರಿಗೆ ಅನೇಕ ಸಲ ಕರೆಯಿಸಿಕೊಂಡು ದುಷ್ಕೃತ್ಯವೆಸಗಿದ್ದಾನೆಂದು ಹೇಳಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ಗಂಡ ಸಾವನ್ನಪ್ಪಿದ್ದರಿಂದ ಮಗ ನಡೆಸುತ್ತಿದ್ದ ವ್ಯಾಪಾರ ಕುಂಠಿತಗೊಂಡಿತ್ತು. ಹೀಗಾಗಿ ಅಂಗಡಿ ಖಾಲಿ ಮಾಡುವಂತೆ ಮಾಲೀಕರು ಒತ್ತಾಯಿಸಲು ಶುರು ಮಾಡಿದ್ದರು. ಈ ವೇಳೆ ಕೆಲವರು ಶಾಸಕರ ಪರಿಚಯ ಮಾಡಿಸಿದ್ದಾರೆ. ಇದಾದ ಬಳಿಕ ಸಹಾಯ ಮಾಡುವ ನೆಪದಲ್ಲಿ ಕಚೇರಿಗೆ ಕರೆಯಿಸಿಕೊಂಡು ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಆದರೆ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳನ್ನ ಶಾಸಕ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿರಿ: ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಗಂಗೂಲಿ... ಯಾವ ಕಾರಣಕ್ಕಾಗಿ?
ಇದೇ ವಿಚಾರವಾಗಿ ಮಾತನಾಡಿರುವ ಇನ್ಸ್ಪೆಕ್ಟರ್ ಅಮನ್ದೀಪ್ ಸಿಂಗ್, ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.