ಚಂಡೀಗಢ (ಪಂಜಾಬ್): ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿಂದು ವಿಭಿನ್ನ ಪ್ರಕರಣವೊಂದರ ವಿಚಾರಣೆ ನಡೆದಿದೆ. ಇಬ್ಬರು ಹುಡುಗಿಯರು ಪರಸ್ಪರ ಮದುವೆಯಾಗಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಪ್ರಕಾರ, ಈ ಹುಡುಗಿಯರು ಚಂಡೀಗಢ ಮತ್ತು ಮೊಹಾಲಿಯ ನಿವಾಸಿಗಳಾಗಿದ್ದಾರೆ. ಇಬ್ಬರೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪರಸ್ಪರ ಮದುವೆಯಾಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಒಬ್ಬಾಕೆಯ ಮನೆಯವರು ಈ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಆದರೆ ಇನ್ನೊಬ್ಬಾಕೆಯ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಭಾರತದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದು ಹೇಳಿದೆ. ಇದಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ಹಂತದಲ್ಲಿವೆ. ಆದ್ದರಿಂದ, ನ್ಯಾಯಾಲಯವು ಹುಡುಗಿಯರು ಮದುವೆಯಾಗಲು ಅನುಮತಿಸುವುದಿಲ್ಲ ಎಂದು ಹೇಳಿದೆ.
ಆದರೆ ಹೈಕೋರ್ಟ್ ಇಬ್ಬರೂ ಒಟ್ಟಿಗೆ ವಾಸಿಸಲು ಅವಕಾಶ ನೀಡಿದೆ. ನಂತರ ಇಬ್ಬರು ಹುಡುಗಿಯರು ನಮ್ಮ ಜೀವಕ್ಕೆ ಬೆದರಿಕೆ ಇದೆ, ಭದ್ರತೆ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಹೈಕೋರ್ಟ್ ಭದ್ರತೆ ನೀಡುವಂತೆ ಚಂಡೀಗಢ ಪೊಲೀಸರಿಗೆ ಆದೇಶಿಸಿದೆ. ಈ ಇಬ್ಬರೂ ಹುಡುಗಿಯರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರೂ ಹುಡುಗಿಯರು ಪರಸ್ಪರ ಮದುವೆಯಾಗಲು ಬಯಸಿದ್ದಾರೆ. ಆದರೆ ಭಾರತೀಯ ಸಂವಿಧಾನದಲ್ಲಿ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ. ಈ ಕಾರಣಕ್ಕಾಗಿ ಮದುವೆಯಾಗಲು ಅನುಮತಿಸಲಿಲ್ಲ. ಇಬ್ಬರು ಬಾಲಕಿಯರು ಪೊಲೀಸ್ ರಕ್ಷಣೆಯಲ್ಲಿ ಲಿವ್ಇನ್ ರಿಲೇಶನ್ ಶಿಪ್ನಲ್ಲಿ ಇರಲು ಅವಕಾಶ ನೀಡಲಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಭದ್ರತೆ ಸಾಂವಿಧಾನಿಕ ಹಕ್ಕು ಹಾಗಾಗಿ ಭದ್ರತೆ ನೀಡಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಇದನ್ನೂ ಓದಿ: ಹೆತ್ತ ಶಿಶುವನ್ನು ಬಕೆಟ್ನಲ್ಲಿ ಬಿಟ್ಟು ಆಸ್ಪತ್ರೆಗೆ ತೆರಳಿದ ತಾಯಿ: ಪೊಲೀಸರು ಮಗುವನ್ನು ರಕ್ಷಿಸಿದ್ದು ಹೀಗೆ..