ಲೂಧಿಯಾನ (ಪಂಜಾಬ್): ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಇದರ ನಡುವೆ ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಸಾವಿಗೀಡಾದ ಘಟನೆಗಳು ಆಗ್ಗಾಗ್ಗೆ ವರದಿಗಳು ಆಗುತ್ತಲೇ ಇರುತ್ತವೆ. ಆದರೆ, ಪಂಜಾಬ್ನ ಆಸ್ಪತ್ರೆಯೊಂದರಲ್ಲಿ ಮೃತ ಯುವಕನ ಶವವನ್ನೇ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಇದರಿಂದ ರೊಚ್ಚಿಗೆದ್ದ ಮೃತನ ಕುಟುಂಬ ಸದಸ್ಯರು ಗಲಾಟೆ ಮಾಡಿ, ಆಸ್ಪತ್ರೆಯ ಆವರಣವನ್ನು ಧ್ವಂಸಗೊಳಿಸಿದ್ದಾರೆ.
ಲೂಧಿಯಾನದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವಕನೋರ್ವ ಜನವರಿ 1ರಂದು ಮೃತಪಟ್ಟಿದ್ದ. ಆದರೆ, ಇದುವರೆಗೂ ಆಸ್ಪತ್ರೆಯ ಅಧಿಕಾರಿಗಳು ಯುವಕನ ಶವವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿರಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿಯೇ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಪಿಠೋಪಕರಣಗಳನ್ನೂ ಒಡೆದು ಹಾಕಿದ್ದಾರೆ.
ಸ್ಥಳದಿಂದ ವೈದ್ಯರು ಪರಾರಿ: ಯುವಕನ ಕಳೆದುಕೊಂಡ ದುಃಖದೊಂದಿಗೆ ಮೃತದೇಹ ಸಿಗದ ಕಾರಣಕ್ಕೆ ಕುಟುಂಬಸ್ಥರು ಮತ್ತು ಸಂಬಂಧಿಕರು ಸೇರಿ ಅನೇಕರು ಆಸ್ಪತ್ರೆಗೆ ಲಗ್ಗೆ ಇಟ್ಟಿದ್ದರು. ಕೋಪದಲ್ಲಿ ಎಸ್‌ಎಂಒ ಕಚೇರಿ, ವೈದ್ಯರ ಕೊಠಡಿ ಮೇಲೆ ದಾಳಿ ಮಾಡಿ ಕಿಟಕಿ, ಗಾಜು, ಹೂಕುಂಡಗಳು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಧ್ವಂಸ ಮಾಡಿದ್ದಾರೆ. ಅಲ್ಲದೇ, ಆಸ್ಪತ್ರೆಯ ಕಾಂಪೌಂಡ್ ಅನ್ನೂ ಧ್ವಂಸಗೊಳಿಸಿದ್ದಾರೆ. ಸ್ಥಳದಲ್ಲಿದ್ದ ಕೆಲ ವೈದ್ಯರ ಮೇಲೂ ದಾಳಿ ಯತ್ನಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: 6 ಕಡೆ ಎನ್ಐಎ ದಾಳಿ, ಇಬ್ಬರು ಐಸಿಸ್ ಸಕ್ರಿಯ ಸದಸ್ಯರ ಬಂಧನ
ಇದರಿಂದ ಭಯಗೊಂಡ ವೈದ್ಯರು ಆಕ್ರೋಶಿತ ಜನರಿಂದ ತಪ್ಪಿಸಿಕೊಳ್ಳಲೆಂದು ಸ್ಥಳದಿಂದ ಪರಾರಿಯಾಗಿದ್ದಾರೆ. ಇತರ ರೋಗಿಗಳು ತಮ್ಮ ಸುರಕ್ಷತೆಗೆ ಹೆದರಿ ಸ್ಥಳದಿಂದ ಪಲಾಯನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದೆ. ಇದರ ನಡುವೆ ಪ್ರತಿಭಟನಾಕಾರರು ಎಸ್‌ಎಂಒ ಕಚೇರಿ ಧ್ವಂಸಗೊಳಿಸಿದ್ದು ಸೇರಿದಂತೆ ಆಸ್ಪತ್ರೆಯಲ್ಲಿ ಹಾನಿ ಮಾಡಲಾದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಮದ ಭರವಸೆ ನೀಡಿದ ಪೊಲೀಸರು: ಆಸ್ಪತ್ರೆಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಆಕ್ರೋಶಿತ ಕುಟುಂಬಸ್ಥರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಅಲ್ಲದೇ, ಮೃತದೇಹ ನಾಪತ್ತೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಭರವಸೆ ನೀಡಿದ್ದಾರೆ. ಇದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿದೆ.
ಮೃತದೇಹ ಬದಲಾವಣೆ?: ನಾವು ಗುರುವಾರದಂದು ಯುವಕನ ಅಂತ್ಯಕ್ರಿಯೆ ನಡೆಸಬೇಕಿತ್ತು. ಆದರೆ, ಮೃತನು ಯುವಕನಾಗಿರುವ ಕಾರಣ ಆಸ್ಪತ್ರೆಯ ಅಧಿಕಾರಿಗಳು ಆತನ ಶವವನ್ನು ಮಾರಾಟ ಮಾಡಿದ್ದಾರೆ. ಇಂತಹ ಕೃತ್ಯ ಎಸಗಿದ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪೊಲೀಸರಿಗೆ ಕುಟುಂಬಸ್ಥರು ಒತ್ತಾಯಿಸಿದರು. ಇತ್ತ, ಈ ಬಗ್ಗೆ ಪ್ರತಿಕ್ರಿಯಿಸಿದ ಎಡಿಸಿಪಿ ರೂಪಿಂದರ್ ಕೌರ್ ಸರನ್, ಕೆಲ ದಿನಗಳ ಹಿಂದೆ ಯುವಕ ಮೃತಪಟ್ಟಿದ್ದು, ಆಸ್ಪತ್ರೆಯ ಅಧಿಕಾರಿಗಳು ಆತನ ದೇಹವನ್ನು ತಪ್ಪಾಗಿ ಬದಲಾಯಿಸಿದ್ದಾರೆ. ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಆಸ್ಪತ್ರೆ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಎರಡು ತಿಂಗಳ ಹಿಂದೆ ಕಾಣೆಯಾದ ಮಹಿಳೆ ಪಾಕ್ ಜೈಲಿನಲ್ಲಿ ಪತ್ತೆ: ತಾಯಿಗೆ ಬಂತು ವಾಟ್ಸಾಪ್ ಕಾಲ್