ಪುಣೆ, ಮಹಾರಾಷ್ಟ್ರ : ಟ್ರಕ್ ಅನ್ನು ರಿವರ್ಸ್ ಗೇರ್ನಲ್ಲಿ ಹಿಂದಕ್ಕೆ ತರುವಾಗ ಭಾರಿ ಅಪಘಾತ ಸಂಭವಿಸಿ, ಮೂವರು ಪಾದಚಾರಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆ ನಗರದ ಬೆಂಗಳೂರು-ಮುಂಬೈ ಹೆದ್ದಾರಿಯಲ್ಲಿರುವ ನಾರ್ಹೆ ಪ್ರದೇಶದ ನವಲೆ ಸೇತುವೆ ಬಳಿ ಘಟನೆ ಸಂಭವಿಸಿದ್ದು, ಅಪಘಾತ ಸಂಭವಿಸಿದ ನಂತರ ಟ್ರಕ್ ಚಾಲಕ ಮತ್ತು ಸಹಾಯಕ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಟ್ರಕ್ ಸತಾರಾಗೆ ಹೋಗುವ ವೇಳೆ ನವ್ಲೆ ಸೇತುವೆ ಹತ್ತುವಾಗ ಇಂಧನ ಖಾಲಿಯಾಗಿದೆ. ಸೇತುವೆ ಏರುವ ಬದಲು ಹಿಂದಕ್ಕೆ ಬಂದರೆ, ಅಲ್ಲಿಯೇ ಪೆಟ್ರೋಲ್ ಬಂಕ್ ಸಿಗುತ್ತದೆ ಎಂದು ತಿಳಿದುಕೊಂಡ ಟ್ರಕ್ ಚಾಲಕ ರಿವರ್ಸ್ ಗೇರ್ನಲ್ಲಿ ಸೇತುವೆಯಿಂದ ಕೆಳಗೆ ಬರಲು ಯತ್ನಿಸಿದ್ದಾನೆ.
ಈ ವೇಳೆ ರಸ್ತೆಯ ಬದಿ ನಿಂತಿದ್ದ ಮೂವರು ಪಾದಚಾರಿಗಳ ಮೇಲೆ ಟ್ರಕ್ ಹಾಯಿಸಲಾಗಿದೆ. ಇದಷ್ಟೇ ಅಲ್ಲದೇ ಮೂರು ಕಾರುಗಳಿಗೂ ಕೂಡಾ ಟ್ರಕ್ ಡಿಕ್ಕಿಯಾಗಿದೆ. ಇದನ್ನು ತಿಳಿದ ಟ್ರಕ್ ಚಾಲಕ ಮತ್ತು ಸಹಾಯಕ ಇಬ್ಬರೂ ಪರಾರಿಯಾಗಿದ್ದಾರೆ.
ಮೃತರನ್ನು ಹೇಮಂತ್ , ನಿತಿನ್ ಧಾವಲೆ ಮತ್ತು ಚೇತನ್ ಸೋಲಂಕಿ ಎಂದು ಗುರ್ತಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿನ್ಹಗಡ್ ರಸ್ತೆ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಸಿಲಿಂಡರ್ ಸ್ಫೋಟ.. ಒಂದೇ ಕುಟುಂಬದ ಐವರು ಮಕ್ಕಳು ಸಜೀವದಹನ