ಪುಣೆ(ಮಹಾರಾಷ್ಟ್ರ) : ಇಲ್ಲಿನ ಬನೇರ್ನ ಹೈ ಸ್ಟ್ರೀಟ್ ಪ್ರದೇಶದಿಂದ ಅಪಹರಣಕ್ಕೊಳಗಾಗಿದ್ದ ನಾಲ್ಕು ವರ್ಷದ ಮಗುವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ನಾಲ್ಕು ವರ್ಷದ ದುಗ್ಗು ಅಲಿಯಾಸ್ ಸ್ವರ್ಣಮ್ ಚವ್ಹಾಣ್ ನನ್ನು ಐದರಿಂದ ಆರು ದಿನಗಳ ಹಿಂದೆ ಪುಣೆಯ ಬನೇರ್ ನ ಹೈ ಸ್ಟ್ರೀಟ್ ಪ್ರದೇಶದಿಂದ ಅಪಹರಿಸಲಾಗಿತ್ತು. ಅಪಹರಣದ ನಂತರ, ಪೊಲೀಸರು ಸ್ವರ್ಣಮ್‌ನನ್ನು ಹುಡುಕಲು ನಿರಂತರ ಶ್ರಮ ಹಾಕಿದ್ದರು.
ಸಾಮಾಜಿಕ ಜಾಲತಾಣಗಳ ಮೂಲಕ ಆತನನ್ನು ಹುಡುಕಿಕೊಡುವಂತೆ ಕುಟುಂಬದವರಿಂದ ಮನವಿ ಕೂಡ ಬಂದಿತ್ತು. ಅಂತಿಮವಾಗಿ, ಚಿಮುರ್ಡಾ ಪೊಲೀಸರು ಪುನಾವಾಲೆಯಲ್ಲಿ ಮಗುವನ್ನು ಪತ್ತೆ ಹಚ್ಚಿದ್ದರು. ಬಳಿಕ ಸ್ವರ್ಣಮ್‌ನನ್ನು ಹೆತ್ತವರ ಬಳಿ ಸುರಕ್ಷಿತವಾಗಿ ಒಪ್ಪಿಸಲಾಗಿದೆ.
ಓದಿ: ಆಫ್ಘನ್ನಲ್ಲಿ ಗುಂಡಿನ ದಾಳಿ: ತಾಲಿಬಾನ್ ಕಮಾಂಡರ್ ಮತ್ತು ಆತನ ಮಗ ಸೇರಿ 6 ಮಂದಿ ಸಾವು
ಕಳೆದ ವಾರ ಬಾಳೆವಾಡಿಯಿಂದ ನಾಲ್ಕು ವರ್ಷದ ಮಗು ಸ್ವರ್ಣಮ್‌ನನ್ನು ಅಪಹರಿಸಲಾಗಿತ್ತು. ಬಳಿಕ ಸ್ವರ್ಣಮ್‌ಗಾಗಿ ಪೊಲೀಸರು ಹಲವು ಸ್ಕ್ವಾಡ್‌ಗಳನ್ನು ರಚಿಸಿದ್ದರು. ಪುಣೆ ಪೊಲೀಸರ ದೊಡ್ಡ ಪಡೆ ಮಗುವನ್ನು ಹುಡುಕಲು ಪ್ರಯತ್ನ ಮಾಡಿತ್ತು. ಈ ಸಂಬಂಧ ಗೌಪ್ಯವಾಗಿ ತನಿಖೆ ಕೂಡಾ ನಡೆಸಲಾಗಿತ್ತು.
ಸುಮಾರು 300 ರಿಂದ 350 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಮಕ್ಕಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಪೊಲೀಸರು ಇಂದು ವಾಕಾಡ್ ಬಳಿಯ ಪುನಾವಾಲೆ ಎಂಬಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಟಿವಿ ತನಿಖೆಯಿಂದ ಸ್ವರ್ಣಮ್ ಆ್ಯಕ್ಟಿವಾ ವಾಹನದಿಂದ ಅಪಹರಿಸಲಾಗಿದೆ ಎಂದು ತಿಳಿದು ಬಂದಿತ್ತು. ಬಾಳೆವಾಡಿ ಪೊಲೀಸ್ ಠಾಣೆಯ ಕೊಂಚ ದೂರದಲ್ಲಿ ಬೆಳಗ್ಗೆ ಈ ಘಟನೆ ನಡೆದಿತ್ತು. ಕೊನೆಗೆ ಚಿಮುರ್ಡಾ ಪೊಲೀಸರು ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ಇತರ ವಿಷಯಗಳ ಮೇಲೆ ನಿಗಾ ಇಟ್ಟಿದ್ದಾರೆ.