ಪುಣೆ(ಮಹಾರಾಷ್ಟ್ರ): ಹೆದ್ದಾರಿ ಯೋಜನೆಗಳಿಗೆ ಭೂಮಿಯನ್ನು ಬಿಟ್ಟುಕೊಟ್ಟ ರೈತರಿಗೆ ಹೆಚ್ಚಿನ ಪರಿಹಾರ ನೀಡಲು 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯೊಬ್ಬರನ್ನು ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಬಂಧಿಸಿದೆ. ಪುಣೆ ವಿಭಾಗದ ಹೆಚ್ಚುವರಿ ವಿಭಾಗೀಯ ಆಯುಕ್ತ ಅನಿಲ್ ರಾಮೋದ್ ಬಂಧಿತ ಆರೋಪಿ.
ಈ ಕಾರ್ಯಾಚರಣೆ ಬಳಿಕ ಮಧ್ಯಾಹ್ನದ ವೇಳೆಗೆ ಕಂದಾಯ ಇಲಾಖೆಯಲ್ಲಿರುವ ರಾಮೋದ್ ಅವರ ಕಚೇರಿ ಹಾಗೂ ಸರ್ಕಾರಿ ನಿವಾಸ ಹಾಗೂ ಬ್ಯಾನರ್‌ನಲ್ಲಿರುವ ‘ಋತುಪರ್ಣ’ ಸೊಸೈಟಿಯ ಖಾಸಗಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತು. ಅವರ ಮನೆಯ ಆವರಣದಲ್ಲಿ ನಡೆಸಿದ ಶೋಧದಲ್ಲಿ 14 ಸ್ಥಿರಾಸ್ತಿಗಳ ದಾಖಲೆಗಳ ಜತೆಗೆ 6 ಕೋಟಿ ರೂ. ನಗದನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಿಲ್ ರಾಮೋದ್ ಐಎಎಸ್ ಅಧಿಕಾರಿಯಾಗಿದ್ದು, ಕಂದಾಯ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಮೋದ್ ಮೂಲತಃ ನಾಂದೇಡ್‌ನವರಾಗಿದ್ದು, ಕಳೆದ 2 ವರ್ಷಗಳಿಂದ ಪುಣೆಯಲ್ಲಿ ಹೆಚ್ಚುವರಿ ವಿಭಾಗೀಯ ಆಯುಕ್ತರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪುಣೆ, ಸತಾರಾ ಮತ್ತು ಸೊಲ್ಲಾಪುರ ಜಿಲ್ಲೆಗಳಿಗೆ ರಾಮೋದ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ದೂರುದಾರರು ತಮ್ಮ ಭೂಸ್ವಾಧೀನ ಕಾನೂನು ಸಂಬಂಧಿತ ಪ್ರಕರಣಗಳು ಮತ್ತು ಕುಂದುಕೊರತೆಗಳಿಗಾಗಿ ಸತಾರಾ ಮತ್ತು ಸೊಲ್ಲಾಪುರ ಜಿಲ್ಲೆಗಳ ಹಲವಾರು ರೈತರನ್ನು ಪ್ರತಿನಿಧಿಸುತ್ತಿದ್ದಾರೆ. ದೂರುದಾರರು ಪ್ರತಿನಿಧಿಸಿದ ರೈತರು, ಹೆದ್ದಾರಿ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿರುವ ತಮ್ಮ ಜಮೀನುಗಳಿಗೆ ಹೆಚ್ಚಿನ ಪರಿಹಾರವನ್ನು ಕೋರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಪ್ರಕಾರ "ರಾಮೋದ್ ಅವರು ದೂರುದಾರರ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದರು ಮತ್ತು ಈ ಬಗ್ಗೆ ದೂರುದಾರರು ಇತ್ತೀಚೆಗೆ ಅವರನ್ನು ಸಂಪರ್ಕಿಸಿದಾಗ ಅವರು ರೈತರು ಕೇಳಿದ ಪರಿಹಾರದ ಹೆಚ್ಚಳದ ಶೇ.10 ರಷ್ಟು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ರಾಮೋದ್ ಅವರು ಸುಮಾರು 1.25 ಕೋಟಿ ರೂಪಾಯಿಗಳ ಪರಿಹಾರಕ್ಕಾಗಿ ದೂರುದಾರರಿಂದ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ 8 ಲಕ್ಷ ರೂಪಾಯಿಗೆ ಮಾತುಕತೆ ನಡೆದಿತ್ತು ಎಂದು ತಿಳಿದು ಬಂದಿದೆ.
ಈ ಬಗ್ಗೆ ನಾಲ್ಕು ದಿನಗಳ ಹಿಂದೆ ಅನಿಲ್ ರಾಮೋದ್ ವಿರುದ್ಧ ದೂರುದಾರರೊಬ್ಬರು ದೂರು ದಾಖಲಿಸಿದ್ದರು. ಲಂಚದ ಬೇಡಿಕೆಯ ಬಗ್ಗೆ ಪ್ರಾಥಮಿಕ ತನಿಖೆಯ ನಂತರ, ಸಿಬಿಐ ಬಲೆ ಬೀಸಿತ್ತು. ಋತುಪರ್ಣ ಸೊಸೈಟಿಯಲ್ಲಿರುವ ಔಂಧ್-ಬನೇರ್ ಪ್ರದೇಶದಲ್ಲಿನ ರಾಮೋದ್ ಅವರ ಬಂಗಲೆ ಮೇಲೆ ಸಿಬಿಐ ತಂಡ ದಾಳಿ ನಡೆಸಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಅವರನ್ನು ಬಂಧಿಸಿದೆ.
ಇಂದು ನ್ಯಾಯಾಲಯಕ್ಕೆ ಹಾಜರು: ಬಳಿಕ ಪುಣೆಯ ಮೂರು ಸ್ಥಳಗಳಲ್ಲಿ ರಾಮೋದ್ ಅವರ ಅಧಿಕೃತ ಮತ್ತು ವಸತಿ ಆವರಣದಲ್ಲಿ ಶೋಧ ನಡೆಸಿದೆ. ಅವರ ಸ್ವಂತ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ನೋಂದಾಯಿಸಲಾದ 14 ಸ್ಥಿರ ಆಸ್ತಿಗಳ ಸಂಬಂಧಿತ ದಾಖಲೆ, ನಗದು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಿಬಿಐ ವಶಕ್ಕೆ ಪಡೆದಿದೆ. "ಕರೆನ್ಸಿ ನೋಟುಗಳ ಮೇಲೆ ಬೆರಳಚ್ಚು ತೆಗೆಯಲಾಗಿದೆ. ಇಂದು (ಶನಿವಾರ) ಪುಣೆಯ ನ್ಯಾಯಾಲಯಕ್ಕೆ ರಾಮೋದ್‌ನನ್ನು ಹಾಜರುಪಡಿಸಲಾಗುವುದು. ಅಲ್ಲಿ ಅವರನ್ನು ಸಿಬಿಐ ಕಸ್ಟಡಿಗೆ ಕೋರಲಾಗುವುದು: ಎಂದು ಅಧಿಕಾರಿಗಳು ತಿಳಿಸಿದ್ದಾರೆ.