ನವದೆಹಲಿ: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿನ ತ್ರಿವರ್ಣ ಧ್ವಜವನ್ನು ಖಲಿಸ್ತಾನಿಗಳು ಇತ್ತೀಚೆಗೆ ಕೆಳಗಿಳಿಸಿದ್ದರು. ಈ ಪ್ರಕರಣದಲ್ಲಿ ಆದ ಭದ್ರತಾ ಲೋಪದ ವಿರುದ್ಧ ಭಾರತ ಸರ್ಕಾರವು ಯುಕೆಗೆ ತಕ್ಕ ಉತ್ತರವನ್ನು ನೀಡಿದೆ. ಹೌದು, ಬುಧವಾರ ನವದೆಹಲಿಯ ಬ್ರಿಟಿಷ್ ಹೈಕಮಿಷನ್ ಕಚೇರಿಗೆ ನೀಡಲಾಗಿದ್ದ ಎಲ್ಲಾ ಬಾಹ್ಯ ಭದ್ರತೆಯನ್ನು ಕೇಂದ್ರ ಸರ್ಕಾರವು ಹಿಂಪಡೆದಿದೆ.
ಮೂಲಗಳ ಪ್ರಕಾರ, ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಮುಂಭಾಗದ ಭದ್ರತಾ ಬ್ಯಾರಿಕೇಡ್‌ಗಳನ್ನು ಮಧ್ಯಾಹ್ನ ತೆಗೆದುಹಾಕಲಾಯಿತು. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಖಾಲಿಸ್ತಾನಿ ಉಗ್ರರಿಂದ ನಡೆದ ಧ್ವಂಸಗೊಳಿಸಿದ ಪ್ರಕರಣದ ಹಿನ್ನೆಲೆ, ಮೂರು ದಿನಗಳ ನಂತರ ಭಾರತವು ಕಟ್ಟುನಿಟ್ಟಾದ ಕ್ರಮವಹಿಸಿದೆ. ಖಲಿಸ್ತಾನಿಗಳು ಭಾರತದ ಹೈಕಮಿಷನ್ ಕಚೇರಿಯಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಅಟ್ಟಹಾಸ ಮೆರೆದಿದ್ದರು. ಖಲಿಸ್ತಾನ್ ಬೆಂಬಲಿತ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ವಿರುದ್ಧ ಭಾರತದಲ್ಲಿನ ಪೊಲೀಸ್ ದಬ್ಬಾಳಿಕೆಯನ್ನು ಖಲಿಸ್ತಾನಿಗಳು ವಿರೋಧಿಸಿದ್ದರು. ದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಕಚೇರಿ ನೀಡಿದ್ದ ಭದ್ರತೆಯನ್ನು ತೆಗೆದುಹಾಕಿರುವ ಬಗ್ಗೆ ಯುಕೆ ಸರ್ಕಾರವು ಪ್ರತಿಕ್ರಿಯಿಸಿಲ್ಲ.
ಖಲಿಸ್ತಾನಿಗಳ ಅಟ್ಟಾಹಾಸ: ''ನಾವು ಭದ್ರತಾ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ'' ಎಂದು ಬ್ರಿಟಿಷ್ ಹೈಕಮಿಷನ್ ವಕ್ತಾರರು ಹೇಳಿದ್ದಾರೆ. ದ್ವಿಪಕ್ಷೀಯ ಸಂಬಂಧವನ್ನು ಹೊಂದಿರುವ ದೇಶಯೊಂದರ ವಿರುದ್ಧ ಭಾರತವು ಮಾಡಿದ ಮೊದಲ ಕಠಿಣ ಕ್ರಮ ಇದಾಗಿದೆ. ಖಲಿಸ್ತಾನಿಗಳು ಲಂಡನ್ನ ಭಾರತದ ಹೈಕಮಿಷನರ್ ಕಚೇರಿಯಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ ಕೆಲವೇ ಗಂಟೆಗಳ ನಂತರ, ಭಾರತದ ವಿದೇಶಾಂಗ ಸಚಿವಾಲಯವು ಮಾರ್ಚ್ 19 ರಂದು ಸಂಜೆ ಅತ್ಯಂತ ಹಿರಿಯ ಯುಕೆ ರಾಜತಾಂತ್ರಿಕರನ್ನು ಕರೆಸಿಕೊಂಡು ಭದ್ರತೆಯ ಲೋಪದ ಬಗ್ಗೆ ವಿವರಣೆ ಕೇಳಿತ್ತು. ಪ್ರತ್ಯೇಕತಾವಾದಿ ಮತ್ತು ಉಗ್ರಗಾಮಿ ಘಟಕಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಭಾರತ ತೀವ್ರವಾಗಿ ಖಂಡಿಸಿತ್ತು.
ವಿನಯ್ ಕ್ವಾತ್ರಾ ಪ್ರತಿಕ್ರಿಯೆ: ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಸೋಮವಾರ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದರು. "ನಾವು ಈಗಾಗಲೇ ಭಾರತದ ಪ್ರತಿಕ್ರಿಯೆಯನ್ನು ತಿಳಿಸಿದ್ದೇವೆ. ಇದರಲ್ಲಿ ಯುಕೆ ಸರ್ಕಾರಕ್ಕೆ ವಿವರಣೆ ಕೇಳಲಾಗಿದೆ. ಅಪರಾಧಿಗಳು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು'' ಎಂದ ಅವರು, ''ಯುಕೆಯಲ್ಲಿನ ಭಾರತದ ಹೈಕಮಿಷನ್ ಕಚೇರಿಯಲ್ಲಿ ಭದ್ರತೆ ಒದಗಿಸುವ ಅಗತ್ಯತೆ ಬಗ್ಗೆ ನಾವು ಬ್ರಿಟಿಷ್ ಅಧಿಕಾರಿಗಳಿಗೆ ಸೂಚಿಸಿದ್ದೇವೆ" ಎಂದು ಕ್ವಾತ್ರಾ ತಿಳಿಸಿದರು.
ಯುಎಸ್ ಚಾರ್ಜ್ ಡಿ ಹೇಳಿದ್ದೇನು?: ನವದೆಹಲಿಯಲ್ಲಿ ಮಾರ್ಚ್ 20ರಂದು ನಡೆದ ಸಭೆಯಲ್ಲಿ, ಯುಎಸ್ ಚಾರ್ಜ್ ಡಿ ಅವರು, ''ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಆಸ್ತಿಯನ್ನು ಧ್ವಂಸಗೊಳಿಸಿದ ಬಗ್ಗೆ ಭಾರತವು ತೀವ್ರ ಪ್ರತಿಭಟಿಸಿದೆ'' ಎಂದು ಹೇಳಿದರು. ರಾಜತಾಂತ್ರಿಕ ಪ್ರಾತಿನಿಧ್ಯವನ್ನು ರಕ್ಷಿಸುವ ಮತ್ತು ಸುರಕ್ಷಿತಗೊಳಿಸುವ ತನ್ನ ಮೂಲಭೂತ ಬಾಧ್ಯತೆಯನ್ನು ಯುಎಸ್ ಸರ್ಕಾರವು ನೆನಪಿಸಿದೆ. ''ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು'' ಎಂದು ಅವರು ಒತ್ತಾಯಿಸಿದರು.
ಲಂಡನ್‌ನಲ್ಲಿ ವಿಧ್ವಂಸಕ ಕೃತ್ಯದ ನಂತರ, ಸಿಖ್ ಮೂಲಭೂತ ವಾದಿಗಳು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸದ ಮೇಲೆ ದಾಳಿ ನಡೆಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸದ ಮೇಲೆ ನಡೆದ ದಾಳಿಯನ್ನು ಅಮೆರಿಕ ತೀವ್ರವಾಗಿ ಖಂಡಿಸಿತ್ತು. "ನಾವು ಖಂಡಿತವಾಗಿಯೂ ಆ ವಿಧ್ವಂಸ ಕೃತ್ಯವನ್ನು ಖಂಡಿಸುತ್ತೇವೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಸ್ಟೇಟ್ ಡಿಪಾರ್ಟ್ಮೆಂಟ್ನ ರಾಜತಾಂತ್ರಿಕ ಭದ್ರತಾ ಸೇವೆಯು ಸ್ಥಳೀಯ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ" ಎಂದು ಶ್ವೇತಭವನದ ಕಾರ್ಯತಂತ್ರದ ಸಂವಹನಗಳ ರಾಷ್ಟ್ರೀಯ ಭದ್ರತಾ ಮಂಡಳಿಯ ಸಂಯೋಜಕ ಜಾನ್ ಕಿರ್ಬಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಕೃತ್ಯ ಸ್ವೀಕಾರಾರ್ಹವಲ್ಲ: "ನಾನು ಸ್ಯಾನ್ ಫ್ರಾನ್ಸಿಸ್ಕೊ ಪೊಲೀಸ್ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೆ, ರಾಜತಾಂತ್ರಿಕ ಭದ್ರತಾ ಸೇವೆಯು ಸ್ಥಳೀಯ ಅಧಿಕಾರಿಗಳೊಂದಿಗೆ ಸರಿಯಾಗಿ ತನಿಖೆ ನಡೆಸುತ್ತಿದೆ ಎಂದು ನಾನು ಹೇಳಬಲ್ಲೆ. ನಿಸ್ಸಂಶಯವಾಗಿ, ಸ್ಟೇಟ್ ಡಿಪಾರ್ಟ್ಮೆಂಟ್ ಮೂಲಸೌಕರ್ಯ ದೃಷ್ಟಿಕೋನದಿಂದ ಹಾನಿಯನ್ನು ಸರಿಪಡಿಸಲು ಕೆಲಸ ಮಾಡಲಿದೆ. ಆದರೆ, ಈ ಕೃತ್ಯ ಸ್ವೀಕಾರಾರ್ಹವಲ್ಲ" ಎಂದು ಅವರು ಹೇಳಿದರು.
ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸದ ಮೇಲೆ ಖಲಿಸ್ತಾನಿಗಳ ದಾಳಿ: ಅಮೆರಿಕ ಖಂಡನೆ