ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನ ರಿಷಿ ಘಾಟಿಯಲ್ಲಿರುವ ಅಗರವಾಲ್ ಸಮಾಜದ ಜಗನ್ನಾಥ ದೇವಸ್ಥಾನದಲ್ಲಿ 60 ವರ್ಷಗಳಿಂದ ಪೂಜಾ ಕಾರ್ಯವನ್ನು ಮಾಡುತ್ತಿರುವ 90 ವರ್ಷದ ವೃದ್ಧ ಅರ್ಚಕರೊಬ್ಬರು ಮಂಗಳವಾರ ಮನನೊಂದು, ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಹಿರಿಯ ಅರ್ಚಕ ಪಂಡಿತ್ ಗೋವಿಂದ್ ರಾಮ್ ಶರ್ಮಾ ಅವರು ದೇವಸ್ಥಾನದ ಆವರಣದಲ್ಲೇ ಸೀಮೆಎಣ್ಣೆ ಎರಚಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ದೇಹ 40ರಷ್ಟು ಭಾಗ ಸುಟ್ಟುಹೋಗಿದ್ದು, ಅರ್ಚಕನನ್ನು ಚಿಕಿತ್ಸೆಗಾಗಿ ಜೆಎಲ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಸ್ಥಾನದ ಟ್ರಸ್ಟ್‌ನ ಸದಸ್ಯರು ಅವರನ್ನು ದೇವಸ್ಥಾನದ ಅರ್ಚಕ ಹುದ್ದೆಯಿಂದ ಹೊರಹಾಕಿದ್ದಕ್ಕೆ ಅಸಮಾಧಾನಗೊಂಡಿದ್ದರು. ಆತ್ಮಾಹುತಿಗೆ ಯತ್ನಿಸುವ ಮುನ್ನವೇ ಅರ್ಚಕ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ, ಈ ಬಗ್ಗೆ ನ್ಯಾಯಯುತ ತನಿಖೆಗೆ ಒತ್ತಾಯಿಸಿದ್ದರು.
ವೈದ್ಯರ ಪ್ರಕಾರ, ಅರ್ಚಕ ಗೋವಿಂದ್ ರಾಮ್ ಅವರ ದೇಹದಲ್ಲಿ ಶೇಕಡಾ 40 ರಷ್ಟು ಸುಟ್ಟ ಗಾಯಗಳಾಗಿವೆ. ಈ ಘಟನೆಗೆ ಕೆಲವು ಗಂಟೆಗಳ ಮೊದಲು, ಅರ್ಚಕ ಗೋವಿಂದ್ ರಾಮ್ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ದೇವಸ್ಥಾನದ ಟ್ರಸ್ಟ್‌ನ ಸದಸ್ಯರು ಕಿರುಕುಳ ನೀಡುತ್ತಿದ್ದಾರೆ ಮತ್ತು ದೇವಸ್ಥಾನದಿಂದ ಬಲವಂತವಾಗಿ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಉನ್ನತ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಕ್ಕಾಗಿ ಮನವಿ ಮಾಡಿದ್ದರು. ಆದರೆ, ದೇವಾಲಯದ ಟ್ರಸ್ಟ್ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅವರನ್ನು ಬೆದರಿಸಿ ದೇವಸ್ಥಾನದಿಂದ ನಿರ್ಗಮಿಸುವಂತೆ ಒತ್ತಾಯಿಸಲಾಗಿತ್ತಂತೆ.
ನಮ್ಮ ತಾತ 60 ವರ್ಷಗಳಿಂದ ಇಲ್ಲಿ ಅರ್ಚಕರಾಗಿದ್ದರು: ಅರ್ಚಕ ಗೋವಿಂದ್ ರಾಮ್ ಅವರ ಮೊಮ್ಮಗ ಭರತ್ ಶರ್ಮಾ ಮಾತನಾಡಿ, ತಮ್ಮ ತಾತ ಗೋವಿಂದ್ ರಾಮ್ 60 ವರ್ಷಗಳಿಂದ ದೇವಾಲಯದಲ್ಲಿ ಪೂಜೆ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ದೇವಸ್ಥಾನದ ಟ್ರಸ್ಟ್‌ನ ಹೊಸ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಸದಸ್ಯರು ಅರ್ಚಕ ಗೋವಿಂದರಾಮ್ ಶರ್ಮಾ ಅವರನ್ನು ದೇವಾಲಯದಿಂದ ಹೊರಹಾಕುವ ಆದೇಶ ನೀಡಿದ್ದಾರೆ ಎಂದರು.
ಈ ಆದೇಶವನ್ನು ವಿರೋಧಿಸಿ, ಅರ್ಚಕರು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಬರಲಿದ್ದು, ದೇವಸ್ಥಾನದಿಂದ ಹೊರಗೆ ಹೋಗುವಂತೆ ಟ್ರಸ್ಟ್ ಸದಸ್ಯರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರು. ಅದಷ್ಟೇ ಅಲ್ಲದೆ ಟ್ರಸ್ಟ್‌ನವರು ದೇವಸ್ಥಾನದಲ್ಲಿ ಹೊಸ ಅರ್ಚಕರನ್ನು ನೇಮಿಸಿದ್ದಾರೆ. ನೂತನ ಅರ್ಚಕರೂ ಜಗಳವಾಡಿಕೊಂಡು ಟ್ರಸ್ಟ್ನವರ ಒತ್ತಾಯದ ಮೇರೆಗೆ ಗಂಜ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.
ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ: ಗಂಜ್ ಪೊಲೀಸ್ ಠಾಣೆಯ ಪ್ರಭಾರಿ ಧರಂವೀರ್ ಮತ್ತು ಎಎಸ್‌ಐ ಬಲದೇವ್ ಚೌಧರಿ ಅವರಿಗೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅವರು ಟ್ರಸ್ಟ್‌ನ ಸದಸ್ಯರ ಪ್ರಭಾವದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಸಹಕರಿಸದ ಕಾರಣ ತಾತ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅಜ್ಜ ಗೋವಿಂದ್ ರಾಮ್ ಶರ್ಮಾ ಅವರು ತಮ್ಮ ಇಡೀ ಜೀವನವನ್ನು ದೇವಾಲಯದ ನಿರ್ವಹಣೆ ಮತ್ತು ಪೂಜೆಯಲ್ಲಿ ಕಳೆದವರು. ಈಗ ತಮ್ಮ ಜೀವನದ ಕೊನೆಯ ಹಂತದಲ್ಲಿ ಎಲ್ಲಿಗೆ ಹೋಗುತ್ತಾರೆ ಎಂದು ಭರತ್ ಶರ್ಮಾ ಹೇಳಿದರು.
ಆತ್ಮಾಹುತಿ ಯತ್ನದ ಕಾರಣ ತನಿಖೆ ನಂತರವೇ ಸ್ಪಷ್ಟ: ಗಂಜ್ ಪೊಲೀಸ್ ಠಾಣೆಯ ಎಎಸ್ಐ ಬಲದೇವ್ ಚೌಧರಿ ಮಾತನಾಡಿ, ಈ ಪ್ರದೇಶದ ಜಗನ್ನಾಥ ದೇವಾಲಯದ ಮಾಜಿ ಅರ್ಚಕ ಗೋವಿಂದರಾಮ್ ಶರ್ಮಾ ಸೀಮೆಎಣ್ಣೆ ಸುರಿದುಕೊಮಡು ಆತ್ಮಹತ್ಯೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಮಾಜಿ ಅರ್ಚಕ ಗೋವಿಂದರಾಮ್ ಶರ್ಮಾ ಅವರು ಜೆಎಲ್‌ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ರಾಮ ಮಂದಿರದಲ್ಲಿ ನನ್ನ ಅಜ್ಜ ಗೋವಿಂದ್ ಒಬ್ಬರೇ ಇದ್ದಾಗ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಅವರ ಮೊಮ್ಮಗ ಭರತ್ ಶರ್ಮಾ ಅವರು ದೇವಸ್ಥಾನದಿಂದ ತೆರವು ಮಾಡುವ ಕುರಿತು ಟ್ರಸ್ಟ್ ಸದಸ್ಯ ಮತ್ತು ಅರ್ಚಕ ಗೋವಿಂದರಾಮ್ ನಡುವೆ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಸಂಶೋಧನೆಯ ನಂತರವಷ್ಟೇ ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಗರ್ಭಿಣಿ.. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ