ಮುಂಬೈ: ಪಾರಾಲಿ ನಿವಾಸಿ ಟಿಕ್ಟಾಕ್ ಸ್ಟಾರ್ 22 ವರ್ಷದ ಪೂಜಾ ಚವಾಣ್ ಆತ್ಮಹತ್ಯೆ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಶಿವಸೇನೆ ನಾಯಕರೊಬ್ಬರ ಹೆಸರನ್ನು ಬಿಜೆಪಿ ನಾಯಕಿ ಚಿತ್ರಾ ವಾಘ್ ತೆಗೆದುಕೊಂಡಿದ್ದಾರೆ.
ಬೀಡ್ ಜಿಲ್ಲೆಯ ಪಾರಾಲಿ ನಿವಾಸಿ ಪೂಜಾ ಚವಾಣ್ ಆತ್ಮಹತ್ಯೆಗೆ ಸಂಬಂಧಿಸಿದ ವಿವಿಧ ಆಡಿಯೋ ತುಣುಕುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಪೂಜಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಮಹಿಳಾ ನಾಯಕಿ ಚಿತ್ರಾ ವಾಘ್, ಶಿವಸೇನಾ ಮುಖಂಡ ಮತ್ತು ರಾಜ್ಯ ಅರಣ್ಯ ಸಚಿವ ಸಂಜಯ್ ರಾಥೋಡ್ ಹೆಸರು ಎತ್ತಿದ್ದು ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಸಿಎಂ ಠಾಕ್ರೆ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ ಅವರು ಅಥವಾ ರಾಜ್ಯ ಗೃಹ ಸಚಿವರು ಯಾವುದೇ ತನಿಖೆಗೆ ಆದೇಶಿಸಿಲ್ಲ ಎಂದು ತಿಳಿದುಬಂದಿದೆ.
ಪೂಜಾ ಚವಾಣ್ ಪುಣೆಯ ಹೆವನ್ ಪಾರ್ಕ್ನಲ್ಲಿನ ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಇದು ಅಪಘಾತ ಪ್ರಕರಣ ಎಂದು ದಾಖಲಾಗಿದೆ. ಅವಳ ಮೊಬೈಲ್ನಲ್ಲಿ ಸಾಕಷ್ಟು ಪುರಾವೆಗಳಿವೆ ಎಂದು ಚಿತ್ರಾ ವಾಘ್ ಹೇಳಿದ್ದಾರೆ.
ಆಕೆ ಆತ್ಮಹತ್ಯೆ ಮಾಡಿಕೊಂಡ ಐದು ದಿನದ ಬಳಿಕ ಆಕೆ ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಕ್ಲಿಪ್ ಹರಿದಾಡುತ್ತಿದ್ದು, ಈ ಆಡಿಯೋದಲ್ಲಿ ಸರ್ಕಾರಕ್ಕೆ ಸಂಬಂಧಿಸಿದವರ ಹೆಸರು ಕೇಳಿಬಂದಿದೆ ಎಂದು ಬಿಜೆಪಿ ಆರೋಪಿಸಿದ್ದು, ಸಿಬಿಐ ತನಿಖೆಗೆ ಆಗ್ರಹಿಸುತ್ತಿದೆ.
ಇದನ್ನೂ ಓದಿ: ನಾ ಭಾರತೀಯಳು, ಜನರೇ ನನಗೆ ರಕ್ಷಕರು.. ಬಿಎಸ್‌ಎಫ್ ಯೋಧರನ್ನ ಮರಳಿ ಕರೆಯಿಸಿಕೊಳ್ಳಿ- ಮಾಹುವಾ ಮೊಯಿತ್ರಾ