ಪುದುಚೇರಿ: ಪುದುಚೇರಿ ಸರ್ಕಾರ ಜನರಿಗೆ ಸಿಹಿಸುದ್ದಿ ನೀಡಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗ್ಯಾಸ್ ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ ಇದು ನೆಮ್ಮದಿ ತಂದಿದೆ. 2023-24ನೇ ಸಾಲಿನ ಬಜೆಟ್ನಲ್ಲಿ ಸರ್ಕಾರ ಈ ಘೋಷಣೆ ಮಾಡಿದೆ. ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಅವರು ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು. ಈ ಯೋಜನೆಗಾಗಿ ಬಜೆಟ್ನಲ್ಲಿ 126 ಕೋಟಿ ರೂ. ಮೀಸಲಿಟ್ಟಿದ್ದಾಗಿ ತಿಳಿಸಿದರು. ಇದಲ್ಲದೇ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು 100 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿರುವ ಕೈಗಾರಿಕೆಗಳಿಗೆ ಸಬ್ಸಿಡಿ ನೀಡಲಾಗುವುದು ಎಂದೂ ಇದೇ ವೇಳೆ ತಿಳಿಸಿದರು.
ವಿವಿಧ ದೇಶಗಳ ತಮಿಳು ವಿದ್ವಾಂಸರು ಭಾಗವಹಿಸುವ ‘ವಿಶ್ವ ತಮಿಳು ಸಮ್ಮೇಳನ’ವನ್ನು ಶೀಘ್ರದಲ್ಲೇ ಸರ್ಕಾರ ಆಯೋಜಿಸಲಿದೆ. ಇದಲ್ಲದೇ ಶ್ರೀ ಅರವಿಂದ ಘೋಷ್ರ 150ನೇ ಜನ್ಮದಿನಾಚರಣೆ ನಿಮಿತ್ತ ಅವರ ಚಿಂತನೆ, ತತ್ವಜ್ಞಾನ, ಯೋಗ, ಸಾಹಿತ್ಯದ ಸಂಶೋಧನೆಗಾಗಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು. ಪುದುಚೇರಿ ಮುಖ್ಯಮಂತ್ರಿ ರಾಮಸ್ವಾಮಿ ಅವರು 11,600 ಕೋಟಿ ವಾರ್ಷಿಕ ಬಜೆಟ್ ಅನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು.
ರಾಜಸ್ಥಾನದಲ್ಲೂ ಗ್ಯಾಸ್ ಬೆಲೆ ಇಳಿಕೆ: ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗ್ಯಾಸ್ ಬೆಲೆ ಇಳಿಕೆ ಕುರಿತು ಪ್ರಮುಖ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳು ಬಳಸುವ ಅಡುಗೆ ಅನಿಲದ ಬೆಲೆ ಅರ್ಧದಷ್ಟು ಕಡಿತ ಮಾಡಲಾಗುವುದು ಎಂದು ಗಹ್ಲೋಟ್ ಹೇಳಿದ್ದರು. ಏಪ್ರಿಲ್ 1, 2023 ರಿಂದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇವಲ 500 ರೂ.ಗೆ ಮರುಪೂರಣ ಪಡೆಯುವ ಸೌಲಭ್ಯವನ್ನು ನೀಡಲಾಗುವುದು ಎಂದು ಅವರು ಘೋಷಿಸಿದ್ದರು.
ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಅರ್ಧ ಬೆಲೆಗೆ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳು ಮಾತ್ರ ಉಜ್ವಲ್ ಯೋಜನೆಗೆ ಅರ್ಹರು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ. 2023ರಲ್ಲಿ ಚುನಾವಣೆ ನಡೆಯಲಿರುವ ಸಂದರ್ಭದಲ್ಲೇ ಸರ್ಕಾರ ಈ ಘೋಷಣೆ ಮಾಡಿದ್ದು, ಈಗಾಗಲೇ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಏರಿಕೆಯಾಗಿರುವುದರಿಂದ ಸಂಕಷ್ಟದಲ್ಲಿರುವ ಜನರು ನಿಟ್ಟುಸಿರು ಬಿಡುವಂತಾಗಿದೆ.
ತೈಲ ಬೆಲೆ ಏರಿಸಿದ್ದ ಕಂಪನಿ: ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೂರನೇ ತಿಂಗಳು ಸಹ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸಿದ್ದವು. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ 350.50 ರೂಪಾಯಿಗೆ ಏರಿಸಿದರೆ, ಗೃಹಬಳಕೆಯ ಸಿಲಿಂಡರ್ ದರ 50 ರೂಪಾಯಿಗೆ ಏರಿಕೆ ಮಾಡಿದ್ದವು.
ಕರ್ಮಷಿಯಲ್ ಗ್ಯಾಸ್ ದರ ಪ್ರತಿ ಸಿಲಿಂಡರ್‌ಗೆ 350.50 ರೂ.ಯಷ್ಟು ಏರಿಕೆ ಮಾಡಿದ್ದರಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 2,119.50 ರೂ.ಗೆ ಬಿಕರಿಯಾಗುತ್ತಿದೆ. ಡೊಮೆಸ್ಟಿಕ್ ಗ್ಯಾಸ್ ದರದಲ್ಲಿ ಪ್ರತಿ ಸಿಲಿಂಡರ್‌ಗೆ 50 ರೂ.ಯಷ್ಟು ಏರಿಕೆಯಾಗಿದ್ದು, ನವದೆಹಲಿಯಲ್ಲಿ 14 ಕೆ.ಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1,103 ರೂ. ಗೆ ಇದೆ. ಪರಿಷ್ಕೃತ ದರ ಮಾರ್ಚ್ 1 ರಿಂದಲೇ ಜಾರಿಗೆ ಬಂದಿದೆ.
ಓದಿ: ಗ್ರಾಹಕರಿಗೆ ಸಿಲಿಂಡರ್ ಪೂರೈಸುವಾಗ, ಹೆಚ್ಚುವರಿ ಡೆಲಿವರಿ ಚಾರ್ಜ್ ತಗೊಂಡ್ರೆ ಲೈಸೆನ್ಸ್ ರದ್ದು: ಡಿಸಿ ಎಚ್ಚರಿಕೆ