ನವದೆಹಲಿ: ಸನಾತನ ಧರ್ಮ ಕುರಿತು ವಿವಾದಿತ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ತಮಿಳುನಾಡು ಸರ್ಕಾರ ಅದೊಂದು 'ಪ್ರಚಾರ ಪ್ರಿಯ ಅರ್ಜಿಗಳು'(ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಶನ್) ಎಂದು ವಾದಿಸಿದೆ.
ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಟೀಕಿಸಿ ಅವಮಾನ ಮಾಡಿದ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ದೆಹಲಿ ಮೂಲದ ವಕೀಲರೊಬ್ಬರು ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠದ ಮುಂದೆ ತಮಿಳುನಾಡು ಸರ್ಕಾರ ಪಿಐಎಲ್ಗಳು ಪ್ರಚಾರಕ್ಕಾಗಿ ಹಾಕಲಾಗುತ್ತಿರುವ ಅರ್ಜಿಗಳ ಸ್ವರೂಪದಲ್ಲಿವೆ ಎಂದು ಹೇಳಿದೆ.
ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ವಕೀಲ ಅಮಿತ್ ಆನಂದ್ ತಿವಾರಿ, ಕೋರ್ಟ್ಗೆ ಸಲ್ಲಿಸಲಾಗುತ್ತಿರುವ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಸ್ವರೂಪ ಬದಲಾಗಿದೆ. ಪಬ್ಲಿಕ್ ಇಂಟ್ರೆಸ್ಟ್ ಲಿಟಿಗೇಶನ್ ಅರ್ಜಿಗಳು ಈಗ ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಶನ್ ಅರ್ಜಿಗಳಾಗಿವೆ. ಪಿಐಎಲ್ ಸಲ್ಲಿಸುವವರ ಸಮಾಜದಲ್ಲಿ ಪ್ರಚಾರಕ್ಕೆ ಬರಬೇಕು ಎಂಬ ಉದ್ದೇಶ ಹೊಂದಿರುತ್ತಾರೆ ಎಂದು ಹೇಳಿದರು.
ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಈಗಾಗಲೇ 40ಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿವೆ. ಇಂತಹ ಯಾವುದೇ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅವರು ಪೀಠಕ್ಕೆ ಒತ್ತಾಯಿಸಿದರು. ಈ ವೇಳೆ ಪೀಠವು ಪಿಐಎಲ್ ಸಲ್ಲಿಸಿದವರಿಗೆ ನೋಟಿಸ್ ನೀಡುವುದಿಲ್ಲ. ಅದನ್ನು ಇನ್ನೊಬ್ಬರೊಂದಿಗೆ ಟ್ಯಾಗ್ ಮಾಡುತ್ತೇವೆ ಎಂದು ಹೇಳಿತು.
ದ್ವೇಷ ಭಾಷಣಕ್ಕೆ ಸಮ: ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರಾಜ್ ಕಿಶೋರ್ ಚೌಧರಿ ಅವರು, ಉದಯನಿಧಿ ಸ್ಟಾಲಿನ್ ಮತ್ತು ಕೇಂದ್ರದ ಮಾಜಿ ಸಚಿವ ಎ. ರಾಜಾ ಅವರು ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆಗಳು ನಿರ್ವಿವಾದವಾಗಿ ದೇಶದ ದೊಡ್ಡ ಜನಸಂಖ್ಯೆಯ ವಿರುದ್ಧ ಮಾಡಿದ ದ್ವೇಷ ಭಾಷಣಕ್ಕೆ ಸಮನಾಗಿದೆ. ಜಾತ್ಯತೀತ ರಾಷ್ಟ್ರದ ಕಲ್ಪನೆಯನ್ನು ನೀಡಿರುವ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.
ಕಳೆದ ವಾರ ನಡೆದ ವಿಚಾರಣೆಯಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ನಿರ್ಮೂಲನಾ ಕಾರ್ಯಕ್ರಮ ಸಂಘಟಕರ ವಿರುದ್ಧ ಯಾಕೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಕೋರಿ ತಮಿಳುನಾಡು ಪೊಲೀಸರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ: ಸನಾತನ ಧರ್ಮದ ಕುರಿತು ಹೇಳಿಕೆ: ಸಚಿವ ಉದಯನಿಧಿ ಸ್ಟಾಲಿನ್ಗೆ ಸುಪ್ರೀಂ ಕೋರ್ಟ್ನಿಂದ ನೋಟಿಸ್ ಜಾರಿ