ನವದೆಹಲಿ: ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಇಬ್ಬರು ಕೌನ್ಸಿಲರ್‌ಗಳು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು. ಎಎಪಿ ನಾಯಕ ದುರ್ಗೇಶ್ ಪಾಠಕ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕ ಆಪ್ಗೆ ಪಕ್ಷಾಂತರವಾದರು. ಇದನ್ನು ವಿರೋಧಿಸಿ ಶುಕ್ರವಾರ ರಾತ್ರಿ ಮುಸ್ತಫಾಬಾದ್‌ನಲ್ಲಿ ಜನಸಾಮಾನ್ಯರು ಕಾಂಗ್ರೆಸ್ ನಾಯಕರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಈಶಾನ್ಯ ದೆಹಲಿಯ ಮುಸ್ತಫಾಬಾದ್ ವಿಧಾನಸಭೆಯ ಬ್ರಿಜ್‌ಪುರಿ ವಾರ್ಡ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿರುವ ನಾಜಿಯಾ ಮತ್ತು ಮುಸ್ತಫಾಬಾದ್‌ನಿಂದ ಸಬಿಲಾ ಬೇಗಂ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಿದರು. ಇದನ್ನು ತಿಳಿದ ಜನ ಆಕ್ರೋಶಗೊಂಡು ಕಾಂಗ್ರೆಸ್ ಮುಖಂಡರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ್ದೇವೆ, ಪಕ್ಷ ಬದಲಿಸಿ ಮತದಾರರಿಗೆ ಮೋಸ ಮಾಡುತ್ತಿದ್ದೀರಿ ಎಂದು ಹೋರಾಟಗಾರರು ಪಕ್ಷಾಂತರ ಆದವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.
ಮತ್ತೆ ಕಾಂಗ್ರೆಸ್‌ಗೆ ಮರಳಿದ ಪಕ್ಷಾಂತರಿಗಳು: ಮತದಾರರ ಆಕ್ರೋಶದ ನಂತರ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹಂದಿ ತಡರಾತ್ರಿ ಕಾಂಗ್ರೆಸ್‌ಗೆ ಮರಳಿದ್ದಾರೆ. ತಮ್ಮೊಂದಿಗೆ ಎಎಪಿ ಸೇರಿದ ಇಬ್ಬರು ಕೌನ್ಸಿಲರ್‌ಗಳು ತಪ್ಪು ಮಾಡಿದ್ದಾರೆ, ಅವರು ಕಾಂಗ್ರೆಸ್‌ನಲ್ಲಿಯೇ ಇರುತ್ತಾರೆ ಎಂಬ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಟೀಕೆ: ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಎಎಪಿ ದೂರುತ್ತಿತ್ತು. ಆದರೆ ಎಎಪಿಯೇ ಈಗ ಕಾಂಗ್ರೆಸ್‌ನಲ್ಲಿ ಆಪರೇಷನ್ ಲೂಟ್ ನಡೆಸುತ್ತಿದೆ. ಸ್ವತಃ ಆಪರೇಷನ್ ಲೂಟ್ ನಡೆಸುತ್ತಿರುವವರೇ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು ದುರದೃಷ್ಟಕರ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಟೀಕಿಸಿದ್ದಾರೆ.
ಇದನ್ನೂ ಓದಿ: ಶಿವಸೇನೆಯಿಂದ ಪ್ರತಿಭಟನೆ: ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್