ಚೆನ್ನೈ, ತಮಿಳುನಾಡು: ಮೊಬೈಲ್ ಬಳಕೆ ಪ್ರಸ್ತುತ ಜನಸಮುದಾಯವನ್ನೇ ಮೋಡಿ ಮಾಡಿರುವುದು ಮಾತ್ರವಲ್ಲದೇ, ಗೀಳಾಗಿ ಪರಿವರ್ತನೆಯಾಗಿದೆ. ಅದರಲ್ಲೂ ಮಕ್ಕಳ ಮೇಲೆ ಇದರ ದುಷ್ಪರಿಣಾಮ ಯಾವ ರೀತಿ ಇದೆ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಈಗ ಮೊಬೈಲ್ನಲ್ಲಿ ಜನಪ್ರಿಯ ಗೇಮ್ ಆಗಿರುವ ಪಬ್ಜಿ (PUBG) ಮಕ್ಕಳು ಅಡಿಕ್ಟ್ ಆಗುತ್ತಿದ್ದು, ಪಬ್ಜಿ ಕಾರಣದಿಂದ ವ್ಯಕ್ತಿಯೊಬ್ಬರು ಸುಮಾರು 8 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ತಮಿಳುನಾಡಿನ ಚೆನ್ನೈ ತೆನಾಂಪೇಟ್ ಪ್ರದೇಶದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುವ ನಟರಾಜನ್ಗೆ ಇಬ್ಬರು ಮಕ್ಕಳು. ಓರ್ವ 10ನೇ ತರಗತಿಯಲ್ಲಿ ಓದುತ್ತಿದ್ದರೆ, ಮತ್ತೊಬ್ಬ 12ನೇ ತರಗತಿ ಓದುತ್ತಿದ್ದನು. ಇನ್ನು ನಟರಾಜನ್ಗೆ ಮನೆಯೊಂದನ್ನು ಕೊಳ್ಳುವ ಕನಸಿದ್ದು, ಅದಕ್ಕಾಗಿ ತನ್ನ ದಿನಸಿ ಅಂಗಡಿಯಲ್ಲಿ ಯಾರಿಗೂ ತಿಳಿಯದಂತೆ ರಹಸ್ಯವಾಗಿ ಹಣವನ್ನು ಕೂಡಿಡುತ್ತಿದ್ದನು. ಸುಮಾರು 8 ಲಕ್ಷ ರೂಪಾಯಿ ಹಣವನ್ನು ಕೂಡಿಟ್ಟಿದ್ದ ಹಣ ಒಮ್ಮೆಲೇ ಕಳುವಾಗಿತ್ತು.
ಪಬ್ಜಿಗಾಗಿ ಮಕ್ಕಳಿಂದ ಕಳ್ಳತನ: ಹಣ ಕಳುವಾದ ನಂತರ ಆಘಾತಗೊಂಡ ನಟರಾಜನ್ ತನ್ನ ದಿನಸಿ ಅಂಗಡಿಗೆ ಯಾರೂ ಕಳ್ಳತನಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಅರಿತು, ತಮ್ಮ ಮಕ್ಕಳನ್ನೇ ಈ ಬಗ್ಗೆ ವಿಚಾರಿಸಿದಾಗ ಮಕ್ಕಳೇ ಹಣವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದರು. ಮಕ್ಕಳು ಪಬ್ಜಿ ಆಟವನ್ನು ಗೀಳಾಗಿಸಿಕೊಂಡಿದ್ದು, ಪಬ್ಜಿ ಆಟದಲ್ಲಿ ನಿಪುಣನಾದ ಸ್ನೇಹಿತನಿಗಾಗಿ ಕದ್ದ ಹಣ ನೀಡಿದ್ದಾಗಿ ಹೇಳಿಕೊಂಡಿದ್ದರು. ಈ ಕುರಿತು ನಟರಾಜನ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿದೆ ಅಸಲಿ ವಿಷಯ: ಹಣ ಕಳುವಾದ ಕುರಿತು ನಟರಾಜನ್ ಪೊಲೀಸರಲ್ಲಿ ದೂರು ನೀಡಿದ್ದಾರೆ. ನಟರಾಜನ್ ಪುತ್ರರು ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಎಂಬುವವರ ಮನೆಗೆ ಬಂದು ಅವರ ಪುತ್ರನೊಂದಿಗೆ ಪಬ್ ಜಿ ಆಡುತ್ತಿದ್ದರು. ಪಬ್ಜಿ ಆಡುವ ವೇಳೆ ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಚೆನ್ನಾಗಿ ಮಾತನಾಡಿಸುವುದು ಮಾತ್ರವಲ್ಲದೇ, ಅವರಿಗೆ ಬೇಕಾದ ತಿಂಡಿ, ತಿನಿಸುಗಳನ್ನು ಮಾಡಿಕೊಡುತ್ತಿದ್ದರು.
ಕೆಲವು ದಿನಗಳ ನಂತರ ಪಬ್ಜಿ ಆಡುವ ವೇಳೆ ಬೆಗ ಬಗೆಯ ತಿಂಡಿ ಮಾಡಿಕೊಡಬೇಕಾದರೆ ಹಣ ನೀಡಬೇಕೆಂದು ನಟರಾಜನ್ ಪುತ್ರರಿಗೆ ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಹೇಳಿದ್ದಾರೆ. ಇದಕ್ಕಾಗಿ ನಟರಾಜನ್ ಪುತ್ರರು 8 ಲಕ್ಷ ಹಣ ಕದ್ದು, ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಅವರಿಗೆ ನೀಡಿದ್ದಾರೆ ಎಂದು ನಟರಾಜನ್ ಹೇಳಿಕೊಂಡಿದ್ದಾರೆ.
ಈಗ ಸದ್ಯಕ್ಕೆ ಆರೋಪಿಗಳಾಗಿರುವ ರಾಜಶೇಖರ್ ಮತ್ತು ಮೆರಿಟಾ ಪುಷ್ಪಾರಾಣಿ ಪರಾರಿಯಾಗಿದ್ದು, ದೂರಿನ ಅನ್ವಯ ಪೊಲೀಸರು ಅವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ಹೆಸರಲ್ಲಿ ಕೋಟಿ ಕೋಟಿ ಕದ್ದ ಸೈಬರ್ ಕಳ್ಳರು.. ಈ ವೈದ್ಯರಿಗೆ 11.80 ಕೋಟಿ ರೂ. ವಂಚನೆ!