ನವದೆಹಲಿ: ಎಲ್ಎಸ್ಎ, ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಒಂದಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾ ಮಿಲಿಟರಿ ನಡೆಸಿದ "ಏಕಪಕ್ಷೀಯ ಮತ್ತು ಪ್ರಚೋದನಕಾರಿ" ಕ್ರಮಗಳಿಗೆ ಭಾರತವು "ದೃಢವಾದ "ಮತ್ತು" ಪರಿಸ್ಥಿತಿ ಉಲ್ಬಣಗೊಳ್ಳದ ರೀತಿಯಲ್ಲಿ " ಪ್ರತಿಕ್ರಿಯಿಸಿದೆ ಎಂದು ರಕ್ಷಣಾ ಸಚಿವಾಲಯವು ವಾರ್ಷಿಕ ವರದಿಯಲ್ಲಿ ತಿಳಿಸಿದೆ.
2020 ರ ಜೂನ್ 15 ರಂದು ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯನ್ನು ಉಲ್ಲೇಖಿಸಿ, ಇದು ದಶಕಗಳಲ್ಲಿ ಉಭಯ ಸೇನೆಯ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಘರ್ಷಣೆಗಳಲ್ಲಿ ಒಂದಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಈ ಇಂಡೋ-ಚೀನಾ ಗಡಿ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ.
ಭಾರತೀಯ ಸೇನೆಯು ಉಭಯ ದೇಶಗಳ ನಡುವಿನ ಎಲ್ಲಾ ಪ್ರೋಟೋಕಾಲ್ ಮತ್ತು ಒಪ್ಪಂದಗಳನ್ನು ಪಾಲಿಸುತ್ತಿದೆ. ಆದರೆ, ಪಿಎಲ್‌ಎ(People's Liberation Army) ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಮೂಲಕ ಮತ್ತು ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಒಟ್ಟುಗೂಡಿಸುವ ಮೂಲಕ LAC ಬಳಿ ಪರಿಸ್ಥಿತಿಯನ್ನು ಹೆಚ್ಚು ಉದ್ವಿಗ್ನಗೊಳಿಸಿತು" ಎಂದು ಅದು ವರದಿಯಲ್ಲಿ ಹೇಳಿದೆ.
ಭಾರತ ಮತ್ತು ಚೀನಾ ಪೂರ್ವ ಲಡಾಖ್‌ನಲ್ಲಿ ಎಂಟು ತಿಂಗಳಿಂದ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಅದು ಎರಡೂ ದೇಶಗಳ ಸಂಬಂಧವನ್ನು ಬಿಗಡಾಯಿಸುವಂತೆ ಮಾಡಿದೆ. ಉಭಯ ದೇಶಗಳೂ ಗಡಿ ಬಿಕ್ಕಟ್ಟು ಪರಿಹರಿಸಲು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿದರು. ಆದಾಗ್ಯೂ, ಚೀನಾದ ನಿಲುವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಯೋಜನವಾಗಿಲ್ಲ.
ಭಾರತೀಯ ಸೇನೆಯು ಐಎಎಫ್ ಹಾಗೂ, ಬಂದೂಕುಗಳು, ಟ್ಯಾಂಕ್‌ಗಳು ಮತ್ತು ಮದ್ದುಗುಂಡುಗಳಂತಹ ಭಾರೀ ಉಪಕರಣಗಳು, ಸೈನಿಕರಿಗೆ ಬೇಕಾದ ಪಡಿತರ ಮತ್ತು ಬಟ್ಟೆಗಳಂತಹ ವಸ್ತುಗಳನ್ನು ಒಳಗೊಂಡಂತೆ ಸಕಲ ರೀತಿಯಲ್ಲಿ ಸೈನ್ಯವನ್ನು ಸಜ್ಜುಗೊಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಇನ್ನು ಜೂನ್ 15 ರ ಘಟನೆಯ ಕುರಿತು ಉಲ್ಲೇಖಿಸಿ "ಗಾಲ್ವಾನ್‌ನಲ್ಲಿ ನಡೆದ ಒಂದು ದೊಡ್ಡ ಮಟ್ಟದ ಗುಂಡಿನ ಚಕಮಕಿಯಲ್ಲಿ, ಚೀನೀ ಸೈನಿಕರು ನಮ್ಮ ಭೂ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯುವ ವೇಳೆ 20 ಭಾರತೀಯ ವೀರ ಸೈನಿಕರು ಪ್ರಾಣ ಕಳೆದುಕೊಂಡರು. ಚೀನಿಯರು ಸಹ ಅಪಾರ ಸಾವುನೋವುಗಳನ್ನು ಅನುಭವಿಸಿದರು" ಎಂದು ವರದಿ ಹೇಳಿದೆ.
ಆಗಸ್ಟ್ 28 ಮತ್ತು 29 ರಂದು, ಮುನ್ನೆಚ್ಚರಿಕೆಯಾಗಿ ಭಾರತೀಯ ಪಡೆಗಳು ನಿಯೋಜನೆ ಮಾಡಲಾಗಿದ್ದು, ಚೀನಾದ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೋ ಉದ್ದಕ್ಕೂ ನಮ್ಮ ಸೇನೆ ಸ್ಥಳವನ್ನು ಆಕ್ರಮಿಸಿಕೊಂಡಿದೆ ಎಂದು ಅದು ಹೇಳಿದೆ. ಪ್ರತಿಕೂಲ ಹವಾಮಾನದ ನಡುವೆ ಭಾರತೀಯ ಸೈನಿಕರನ್ನು ಈ ಎತ್ತರದ ಪ್ರದೇಶದಲ್ಲಿ ನಿಯೋಜಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಅಡ್ವಾನ್ಸ್ ವಿಂಟರ್ ಸ್ಟಾಕಿಂಗ್ (ಎಡಬ್ಲ್ಯೂಎಸ್) ಮತ್ತು ಸೇನೆಯ ಬಲವರ್ಧನೆಗಾಗಿ ಚಳಿಗಾಲದ ಸಿದ್ಧತೆಗಳು ಪೂರ್ಣಗೊಂಡಿವೆ ಮತ್ತು ಚೀನಾದ ಪಡೆ ನಡೆಸಬಹುದಾದ ಯಾವುದೇ ದುಷ್ಕೃತ್ಯ ಎದುರಿಸಲು ನಮ್ಮ ಸೈನಿಕರು ಉತ್ತಮ ರೀತಿ ತಯಾರಾಗಿದ್ದಾರೆ. ಭಾರತೀಯ ಸೈನ್ಯವು ಯಾವುದೇ ಸಂಭವನೀಯತೆಗೆ ಸಿದ್ಧವಾಗಿದ್ದರೂ, ಸಹ ಚೀನಾದೊಂದಿಗಿನ ಗಡಿ ಸಮಸ್ಯೆಯನ್ನು ಸೌಹಾರ್ದಯುತ ರೀತಿಯಲ್ಲಿ ಪರಿಹರಿಸಲು ಮಾತುಕತೆಗಳು ಪ್ರಗತಿಯಲ್ಲಿವೆ , ಎಂದು ರಕ್ಷಣಾ ಸಚಿವಾಲಯ ವರದಿಯಲ್ಲಿ ಹೇಳಿದೆ.
ಇನ್ನು ಭಯೋತ್ವಾದಕರನ್ನು ಹತ್ತಿಕ್ಕುವಲ್ಲಿ ಭಾರತೀಯ ಸೇನೆ ನಡೆಸಿರುವ ಕಾರ್ಯಾಚರಣೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಿದ್ದು, ಪಾಕಿಸ್ತಾನ ಸೇನೆ ಮಾಡಿದ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೈನ್ಯವು ಸೂಕ್ತ ಉತ್ತರವನ್ನು ನೀಡಿದ್ದು, ಪಾಕ್ ಸೇನೆಗೆ ಕೂಡ ಸಾವು - ನೋವುಗಳನ್ನು ಉಂಟುಮಾಡಿದೆ ಎಂದು ವರದಿ ತಿಳಿಸಿದೆ. ತನ್ನ ಹದ್ದಿನ ಕಣ್ಣಿನ ಮೂಲಕ ಸೇನೆ ಎಲ್ಒಸಿ ಗಡಿಯಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಹಲವಾರು ಪ್ರಯತ್ನಗಳನ್ನು ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ವಿಫಲಗೊಳಿಸಿದೆ ಎಂದು ಅದು ಹೇಳಿದೆ. ಅದೇ ರೀತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಸುಸಜ್ಜಿತ, ಗುಪ್ತಚರ ಆಧಾರಿತ ಕಾರ್ಯಾಚರಣೆಗಳು ಗಮನಾರ್ಹ ಯಶಸ್ಸು ಗಳಿಸಿವೆ ಎಂದು ವರದಿ ಹೇಳಿದೆ.
"ಪಿರ್ ಪಂಜಾಲ್ ಶ್ರೇಣಿಯ ದಕ್ಷಿಣಕ್ಕೆ ಹಿಂಸಾಚಾರವನ್ನು ಹರಡುವ ಪ್ರಯತ್ನಗಳನ್ನು ಪೂರ್ವಭಾವಿ ಕಾರ್ಯಾಚರಣೆಗಳಿಂದ ಸಮಗ್ರವಾಗಿ ಸೋಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ವರದಿ ಹೇಳಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ, ಇದು ಜನರಿಗೆ ಶಾಂತಿಯುತ ಜೀವನವನ್ನು ನಡೆಸಲು ಅವಕಾಶವನ್ನು ನೀಡುತ್ತದೆ ಎಂದು ರಕ್ಷಣಾ ಸಚಿವಾಲಯದ ವರದಿ ಹೇಳಿದೆ.
ಇನ್ನು ರಕ್ಷಣಾ ಪಡೆಗಳನ್ನು ಆಧುನೀಕರಿಸುವ ಸರ್ಕಾರದ ಪ್ರಯತ್ನಗಳ ಜೊತೆಗೆ ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ಕಾರ್ಯಚಟುವಟಿಕೆಯ ವಿವಿಧ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಫೆ.8ರಿಂದ ವಾಟ್ಸ್ಆ್ಯಪ್ನಲ್ಲಿ ಪರಿಷ್ಕೃತ ಗೌಪ್ಯ ನೀತಿ: ಈ ನಿಯಮ ಒಪ್ಪಿದರಷ್ಟೇ ಸೇವೆ ಮುಂದುವರಿಕೆ